ಕರಗಡ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆಗ್ರಹಿಸಿ ಚಿಕ್ಕಮಗಳೂರಲ್ಲಿ ಜೆಡಿಎಸ್ ಪ್ರತಿಭಟನೆ

1117

ಚಿಕ್ಕಮಗಳೂರು : ಕರಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರದ ವಿರುದ್ದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ದೇವಿಕೆರೆ ಸಮೀಪ ಬುಧವಾರ ಪ್ರತಿಭಟನೆ ನಡೆಸಿದರು.

ನಗರದಿಂದ ವಾಹನಗಳಲ್ಲಿ ತೆರಳಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮುಖ್ಯ ರಸ್ತೆಯಿಂದ ದೇವಿಕೆರೆವರೆಗೆ ಮೆರವಣಿಗೆ ನಡೆಸಿ ಕಾಂಗ್ರೇಸ್ ಮತ್ತು ಬಿಜೆಪಿ ವಿರುದ್ದ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್ 16 ರಿಂದ 20 ಕೋಟಿ ರೂ ವ್ಯಯಿಸಿ ಮಾಡಲಾಗಿರುವ ಕರಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆಯಾಗಿದೆ ಎಂದು ಆರೋಪಿಸಿದರು.

ಸದಾ ಬರಗಾಲದ ದವಡೆಗೆ ತುತ್ತಾಗುವ ಜಿಲ್ಲೆಯ ಬಯಲು ಪ್ರದೇಶಕ್ಕೆ ನೀರುಣಿಸುವ ಮಹತ್ವಾಕಾಂಕ್ಷೆಯಿಂದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಕರಗಡ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದು ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ಕಾಂಗ್ರೇಸ್ ಸರ್ಕಾರ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ದೂರಿದರು.

ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿ ಶಾಸಕ ಸಿ.ಟಿ.ರವಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಬಹಳಷ್ಟು ಹಣವನ್ನು ಕೊಳ್ಳೆ ಹೊಡೆದಿದ್ದಾರೆ, ಅನನುಭವಿ ಕಂಟ್ರಾಕ್ಟರ್‍ಗೆ ಗುತ್ತಿಗೆ ನೀಡುವ ಮೂಲಕ ಕಳಪೆ ಕಾಮಗಾರಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ಹೊಣೆಯನ್ನು ಕಾಂಗ್ರೇಸ್ ಮತ್ತು ಬಿಜೆಪಿ ಹೊರಬೇಕು, ಶಾಸಕ ಸಿ.ಟಿ.ರವಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಅವೈಜ್ಞಾನಿಕ, ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರ ನಡೆಸುವ ಮೂಲಕ ಕಾಂಗ್ರೇಸ್ ಮತ್ತು ಬಿಜೆಪಿ ಬಯಲುಸೀಮೆಯ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ ಎಂದು ದೂರಿದರು. ಈಗ ನಡೆದಿರುವ ಕಾಮಗಾರಿ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜೆಡಿಎಸ್ ಹಿಂದುಳಿದ ವರ್ಗ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೇವರಾಜ್ ಅರಸ್, ಪ.ಜಾತಿ/ಪ.ವರ್ಗ ವಿಭಾಗದ ಜಿಲ್ಲಾಧ್ಯಕ್ಷ ದೇವಿಪ್ರಸಾದ್, ಯುವಜನತಾದಳದ ಜಿಲ್ಲಾಧ್ಯಕ್ಷ ಕೋಟೆ ವಿನಯ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ನಗರಸಭೆ ಸದಸ್ಯ ದಿನೇಶ್, ಮುಖಂಡರಾದ ನೂರ್‍ಅಹಮದ್, ಬಿ.ಕೆಂಗೇಗೌಡ, ಈಶ್ವರಹಳ್ಳಿ ಅಣ್ಣೇಗೌಡ, ಚಿದಾನಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

LEAVE A REPLY

Please enter your comment!
Please enter your name here