ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದು ಬಳಿಕ ಆತ್ತೆಗೆ ಕರೆ ಮಾಡಿ ತಿಳಿಸಿ ತಾನೇ ಹೋಗಿ ಚಂದ್ರಲೇಔಟ್ ಠಾಣೆ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.
ಮೂಡಲಪಾಳ್ಯ ಸಮೀಪದ ಶಿವಾನಂದ ನಗರದ ಗೀತಾ (33) ಹತ್ಯೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪತಿ ಶಂಕರ್ ಪೊಲೀಸರಿಗೆ ಶರಣಾಗಿದ್ದಾನೆ.
13 ವರ್ಷಗಳ ಹಿಂದೆ ತಮಿಳುನಾಡು ರಾಜ್ಯದ ಹೊಸೂರು ಮೂಲದ ಗೀತಾ ಹಾಗೂ ಟ್ರಾವೆಲ್ಸ್ ಏಜೆನ್ಸಿ ಮಾಲಿಕ ಶಂಕರ್ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮೂಡಲಪಾಳ್ಯ ಸಮೀಪದ ಶಿವಾನಂದ ನಗರದಲ್ಲಿ ಶಂಕರ್ ಕುಟುಂಬ ನೆಲೆಸಿತ್ತು. ಕೆಲ ದಿನಗಳಿಂದ ಪರಪರುಷನ ಜತೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡಿದ್ದ ಶಂಕರ್, ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅಂತೆಯೇ ಬುಧವಾರ ರಾತ್ರಿ ಸಹ ಇವರಿಬ್ಬರ ನಡುವೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದ್ದು, ಬಳಿಕ ಆರೋಪಿ ಶಂಕರ್ ದೂರವಾಣಿ ಮೂಲಕ ಅತ್ತೆಯನ್ನು ಸಂಪರ್ಕಿಸಿದ್ದು, ಗೀತಾಳನ್ನು ಕೊಂದಿರುವುದಾಗಿ ತಿಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.