ಬೆಂಗಳೂರು: ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳಲು ಸ್ಪಷ್ಟ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದರು.
ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಗಳ ಡಿಸಿ, ಸಿಇಒಗಳ ಜೊತೆ ಸಭೆ ನಡೆಸಿದ್ದೇವೆ. ಉಸ್ತುವಾರಿ ಸಚಿವರುಗಳು ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಈ ಬಾರಿ ಬರಗಾಲ ಇದೆ. 223 ತಾಲೂಕುಗಳಲ್ಲಿ ಬರಗಾಲ ಇದೆ. ನೀರಿನ ಕೊರತೆ, ಸಮಸ್ಯೆಗಳ ಬಗ್ಗೆ ವರದಿಯಾಗುತ್ತಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ ಎಂದರು.
ಅದಕ್ಕಾಗಿ ಬೇಕಾದ ಹಣವನ್ನು ಕೊಡುತ್ತೇವೆ. ಡಿಸಿಗಳ ಪಿಡಿ ಖಾತೆಯಲ್ಲಿ 854 ಕೋಟಿ ರೂ. ಹಣ ಇದೆ. 130 ಕೋಟಿ ರೂ. ತಹಶೀಲ್ದಾರ್ ಖಾತೆಯಲ್ಲಿ ಇದೆ. ಪ್ರತಿ ತಾಲೂಕಿನಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಟಾಸ್ಕ್ ಫೋರ್ಸ್ ಆಗಿದ್ದಾಂಗೆ ಸಭೆ ನಡೆಸಿ ಮೇವು, ಕುಡಿಯುವ ನೀರಿನ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. 307 ಜಿಲ್ಲಾ ಮಟ್ಟದ ಸಭೆ ಮಾಡಲಾಗಿದೆ. ಯಾವ ಜಿಲ್ಲೆಗಳಲ್ಲಿ, ಗ್ರಾಮಗಳಲ್ಲಿ, ವಾರ್ಡ್ಗಳಲ್ಲಿ ಸಮಸ್ಯೆ ಇದೆ ಅದಕ್ಕೆ ಬೇಕಾದ ಪ್ಲಾನ್ ರೂಪಿಸಬೇಕು ಎಂದು ಸೂಚಿಸಿದ್ದೇವೆ ಎಂದರು.
98 ತಾಲೂಕುಗಳು, 412 ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 175 ಗ್ರಾಮಗಳಲ್ಲಿ 204 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 500 ಗ್ರಾಮಗಳಲ್ಲಿ 596 ಖಾಸಗಿ ಬೋರ್ವೆಲ್ನಿಂದ ನೀರು ಪೂರೈಸಲಾಗುತ್ತಿದೆ. 646 ಟಾಸ್ಕ್ ಫೋರ್ಸ್ ಸಭೆಗಳನ್ನು ಮಾಡಲಾಗಿದೆ. ಬಿಬಿಎಂಪಿಯಲ್ಲಿ 120 ಹಾಗೂ ಜಲಮಂಡಳಿಯಿಂದ 232 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
20 ನಗರ ಪ್ರದೇಶಗಳಲ್ಲಿ 96 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸರ್ಕಾರ ಕೊಳವೆ ಬಾವಿಯನ್ನು ಆಳ ಮಾಡುವುದು, ಮೆಷಿನ್ ಅಳವಡಿಕೆ ಮಾಡುವುದು ಮಾಡಬೇಕು. ಖಾಸಗಿ ಕೊಳವೆ ಬಾವಿ ಜೊತೆಗೆ ಒಪ್ಪಂದ ಮಾಡಿ ಅವರಿಗೆ ಹಣ ಕೊಟ್ಟು ನೀರು ಸರಬರಾಜು ಮಾಡಬೇಕು. ಅನಿವಾರ್ಯವಾದಲ್ಲಿ ಕೊಳವೆ ಬಾವಿ ತೋಡಿಸಲು ಡಿಸಿಗಳಿಗೆ, ಸಿಇಒಗಳಿಗೆ ಅಧಿಕಾರ ನೀಡಲಾಗಿದೆ. ಇದಕ್ಕಾಗಿ 70 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದರು.