ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯದಲ್ಲಿ ಲಾಕ್ ಡೌನ್ ಅನಿವಾರ್ಯವಾಗಬಹುದು : ಸಿಎಂ ಬಿಎಸ್ ವೈ.

106
firstsuddi

ಬೆಂಗಳೂರು : ನಗರದಲ್ಲಿ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಜನರು ಜನತಾ ಕರ್ಫ್ಯೂಗೆ ಸಹಕಾರ ನೀಡುತ್ತಿಲ್ಲ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು. ಇಲ್ಲದಿದ್ದರೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಸರ್ಕಾರ ಮೀನಮೇಷ ಎಣಿಸದೆ ತಕ್ಷಣವೇ ಲಾಕ್ ಡೌನ್ ಘೋಷಣೆ ಮಾಡಿ ಜನರ ಸಾವು-ನೋವಿನ ಸಂಖ್ಯೆಯನ್ನು ಕಡಿಮೆ ಮಾಡಲಿ ಎಂಬ ಒತ್ತಡ ಕೇಳಿಬರುತ್ತಿದೆ. ಹೀಗಾಗಿ ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯದಲ್ಲಿ ಲಾಕ್ ಡೌನ್ ಅನಿವಾರ್ಯವಾಗಬಹುದು ಎಂದರು.

ಲಾಕ್ ಡೌನ್ ಹೇರಿಕೆ ಮಾಡುವ ಕುರಿತು ಅಧಿಕಾರಿಗಳು ಹಾಗೂ ತಜ್ಞರ ಜೊತೆ ಇಂದು-ನಾಳೆ ಕುಳಿತು ಚರ್ಚಿಸಿ ಸಮಾಲೋಚನೆ ಮಾಡಿ ಇನ್ನೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಅಣ್ಣಮ್ಮ ತಾಯಿ ಆಶೀರ್ವಾದದಿಂದ ಕೋವಿಡ್ ಸಂಕಷ್ಟ ಆದಷ್ಟು ಬೇಗ ದೂರ ಆಗಿ ದೇಶದ ಜನರು ನೆಮ್ಮದಿಯಿಂದ ಬದುಕುವ ಕಾಲ ಮತ್ತೆ ಬರುತ್ತದೆ ಎಂಬ ವಿಶ್ವಾಸ ಇದೆ ಎಂದರು.

ತೇಜಸ್ವಿ ಸೂರ್ಯ ಅವರು ರಿಸ್ಕ್ ತೆಗೆದುಕೊಂಡು ಬೆಡ್ ಬ್ಲಾಕಿಂಗ್ ದಂಧೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದರು. ವಿಧಾನಸೌಧದಲ್ಲಿ ಒಂದು ಗಂಟೆ ಕಾಲ ಅವರ ಜೊತೆ ಮಾತನಾಡಿ, ಬಿಗಿಯಾದ ಕ್ರಮ ಕೈಗೊಂಡಿದ್ದೇನೆ. ತೇಜಸ್ವಿ ಸೂರ್ಯ ಮಾಡಿದ ಒಳ್ಳೆ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು ಎಂದರು.

ಆಸ್ಪತ್ರೆ ಸಮಸ್ಯೆ ಎಂದು ಹೇಳಿಕೊಂಡು ಜನರು ಸಿಎಂ ನಿವಾಸ, ವಿಧಾನ ಸೌಧ ಮುಂದೆ ಬರುವುದು ಸರಿಯಲ್ಲ. ಜನರಿಗೆ ಸಮಸ್ಯೆಯಿದೆ ಎಂದು ಗೊತ್ತಾದ ತಕ್ಷಣ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡುತ್ತಾರೆ. ಅಧಿಕಾರಿಗಳ ಗಮನಕ್ಕೆ ತಕ್ಷಣ ತನ್ನಿ ಎಂದು ಹೇಳಿದರು.