ಪೊಲೀಸರ ಭರ್ಜರಿ ಕಾರ್ಯಾಚರಣೆ – ಚೆಕ್‌ಪೋಸ್ಟ್‌ಗಳಲ್ಲಿ 15 ಲಕ್ಷ ನಗದು, ತಂಬಾಕು ವಶಕ್ಕೆ…

13
firstsuddi

ಗದಗ: ಚುನಾವಣೆಗೂ ಮುನ್ನವೇ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ, ತಂಬಾಕು ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿ ವೈಶಾಲಿ, ಎಸ್ ಪಿ ಬಿ. ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ನಗರದ ಮುಳಗುಂದ ರಸ್ತೆಯಲ್ಲಿನ ಚೆಕ್ ಪೋಸ್ಟ್ ತಪಾಸಣೆ ವೇಳೆ ದಾಖಲೆ ಇಲ್ಲದ 500 ರೂಪಾಯಿ ಮುಖ ಬೆಲೆಯ 15 ಲಕ್ಷ ರೂ. ಹಣ, ಲಕ್ಷಾಂತರ ಮೌಲ್ಯದ ತಂಬಾಕು ಸಿಕ್ಕಿದೆ.

ಹಾವೇರಿ ಜಿಲ್ಲೆ ಹುಲಗೂರನಿಂದ ಗದಗ ಮಾರ್ಗವಾಗಿ ದೇವದುರ್ಗಕ್ಕೆ ಹೊರಟಿದ್ದ ಕಾರಿನಲ್ಲಿ ದಾಖಲೆ ಇಲ್ಲದೇ ತೆಗೆದುಕೊಂಡು ಹೊರಟಿದ್ದ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಡರಗಿ ಚೆಕ್‌ಪೋಸ್ಟ್‌ನಲ್ಲಿ ತಂಬಾಕು ಸೀಜ್ ಮಾಡಲಾಗಿದೆ. ಶಿವರಾಜ್ ನಾಗರಕಟ್ಟಿ ಎಂಬವರು ಬಿಲ್ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ 1 ಲಕ್ಷ 84 ಸಾವಿರ ರೂ. ಮೌಲ್ಯದ ತಂಬಾಕು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನು ಗದಗದಿಂದ ಮುಂಡರಗಿ ಮಾರ್ಗವಾಗಿ ಕೊಪ್ಪಳಕ್ಕೆ ರವಾನೆ ಮಾಡಲಾಗುತ್ತಿತ್ತು.

ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಚೆಕ್‌ಪೋಸ್ಟ್‌ನಲ್ಲಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 1 ಲಕ್ಷ 10 ಸಾವಿರ ರೂ. ಮೌಲ್ಯದ ತಂಬಾಕು ಜಪ್ತಿ ಮಾಡಲಾಗಿದೆ. ಇದು ರಾಣೆಬೆನ್ನೂರಿನಿಂದ ಶಿರಹಟ್ಟಿಗೆ ಶ್ಯಾಮ ನವಲೆ ಎಂಬವರು ಸಾಗಿಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.