ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ ನ ಮೆಗಾ ಹರಾಜು ಇಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ನಲ್ಲಿ ಪ್ರಾರಂಭವಾಗಿದೆ. ಈ ಮೆಗಾ ಹರಾಜಿನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ 3.40 ಕೋಟಿಗೆ ಆರ್ ಸಿಬಿ ತಂಡದ ಪಾಲಾಗಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಯ ಸ್ಮೃತಿ ಮಂದಾನ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಸಾಕಷ್ಟು ಪೈಪೋಟಿ ನಡೆದಿತ್ತು. ಅಂತಿಮವಾಗಿ ಆರ್ ಸಿಬಿ 3.40 ಕೋಟಿ ರೂ. ಗಳಿಗೆ ಮಂದಾನ ಅವರನ್ನ ಖರೀದಿಸುವಲ್ಲಿ ಯಶಸ್ವಿಯಾಯಿತು.
ಇನ್ನುಳಿದಂತೆ ಆಸ್ಟೇಲಿಯಾ ತಂಡದ ಆಶ್ಲೀಗ್ ಗಾರ್ಡ್ನರ್ 3.20 ಕೋಟಿಗೆ ಗುಜರಾತ್ ಜೈಂಟ್ಸ್ ತಂಡದ ಪಾಲಾಗಿದ್ದು, ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 1.80 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾದರೆ, ದೀಪ್ತಿ ಶರ್ಮಾ 2.6 ಕೋಟಿಗೆ ಯುಪಿ ವಾರಿಯರ್ಸ್, ಶೆಫಾಲಿ ವರ್ಮಾ 1.90 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ.
ನ್ಯೂಜಿಲೆಂಡ್ ತಂಡದ ಸೋಫಿ ಡಿವೈನ್(50 ಲಕ್ಷ ರೂ.), ಆಸ್ಟ್ರೇಲಿಯಾದ ಎಲ್ಲಿಸ್ ಪರ್ರೆ (1.7 ಕೋಟಿ ರೂ.) ಹಾಗೂ ರೇಣುಕಾ ಸಿಂಗ್ (1.5 ಕೋಟಿ ರೂ.) ಅವರನ್ನು ಆರ್ ಸಿಬಿ ಖರೀದಿಸಿದೆ.
ಸೋಫಿ ಎಕ್ಲೆಸ್ಟೋನ್ 1.8 ಕೋಟಿ ರೂ. ನೀಡಿ ಯುಪಿ ವಾರಿಯರ್ಸ್ ಖರೀದಿಸಿದರೆ, ಆಸ್ಟ್ರೇಲಿಯಾದ ಆಟಗಾರ್ತಿ ಬೆತ್ ಮೂನೀ ರೂ. 2 ಕೋಟಿಗೆ ಗುಜರಾತ್ ಜೈಂಟ್ಸ್ ತಂಡ ಸೇರಿದರು. ದಕ್ಷಿಣ ಆಫ್ರಿಕಾದ ಆಟಗಾರ್ತಿ ಶಬ್ನಿಮ್ ಇಸ್ಮಾಯಿಲ್ ಅವರನ್ನು ರೂ.1 ಕೋಟಿಗೆ ಯುಪಿ ವಾರಿಯರ್ಸ್ ತಂಡ ಖರೀದಿಸಿತು. ನ್ಯೂಜಿಲೆಂಡ್ ಆಟಗಾರ್ತಿ ಅಮೆಲಿಯಾ ಕೆರ್ ಮುಂಬೈ ಇಂಡಿಯನ್ಸ್ ಗೆ ರೂ.1 ಕೋಟಿಗೆ ಬಿಕರಿಯಾದರು.
ಐಪಿಎಲ್ ಹರಾಜುಗಾಗಿ ಒಟ್ಟಾರೆ 1,525 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದು, ಅಂತಿಮ ಪಟ್ಟಿಯಲ್ಲಿ 409 ಆಟಗಾರ್ತಿಯರನ್ನು ಹೆಸರಿಸಲಾಯಿತು.