ಕೊಟ್ಟಿಗೆಹಾರ- ಹೊರನಾಡು- ಕೊಟ್ಟಿಗೆಹಾರ ರಾಜ್ಯ ಹೆದ್ದಾರಿಯ ಜಾವಳಿಯ ಕೆಂಪುಮೋರಿ ಸಮೀಪ ರಸ್ತೆ ಕುಸಿಯಲು ಪ್ರಾರಂಭಿಸಿದ್ದು ಸಂಪರ್ಕ ಕಡಿತದ ಬೀತಿ ಎದುರಾಗಿದೆ.
ಜಾವಳಿಯ ಕೆಂಪುಮೋರಿ ಸಮೀಪ ರಸ್ತೆಯ ಎಡಬದಿಯಲ್ಲಿ ತಡೆಗೋಡೆ ಇಲ್ಲದೆ ರಸ್ತೆಯ ಮಣ್ಣು ಕುಸಿಯಲು ಪ್ರಾರಂಭಿಸಿದೆ. ದಿನದಿಂದ ದಿನಕ್ಕೆ ಮಣ್ಣು ಕುಸಿಯುತ್ತಿರುವ ಪ್ರಮಾಣ ಹೆಚ್ಚುತ್ತಿದ್ದು ಹೀಗೆ ಮುಂದುವರಿದರೆ ರಸ್ತೆ ಮದ್ಯಬಾಗದವರೆಗೆ ಮಣ್ಣು ಕುಸಿಯುವ ಸಾಧ್ಯತೆ ಇದ್ದು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿದ ಜಾವಳಿ ಗ್ರಾ.ಪಂ ಸದಸ್ಯ ಅಶ್ವತ್ ಜಾವಳಿ, ಹೆದ್ದಾರಿ ಬದಿಯಲ್ಲಿ ತಡೆಗೋಡೆ ಇಲ್ಲದೆ ಇರುವುದರಿಂದ ಹಲವು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ರಸ್ತೆ ಕುಸಿಯತೊಡಗಿದ್ದು ಕೂಡಲೆ ತಡೆಗೋಡೆ ನಿರ್ಮಿಸುವ ಅಗತ್ಯವಿದೆ. ಈ ಮಾರ್ಗವಾಗಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕೆಲ ಘನವಾಹನಗಳು ಕೂಡ ಈ ಮಾರ್ಗವಾಗಿ ಸಂಚರಿಸುತ್ತಿದ್ದು ಶೀಘ್ರವಾಗಿ ತಡೆಗೋಡೆ ನಿರ್ಮಿಸದೆ ಇದ್ದಲ್ಲಿ ಘನವಾಹನಗಳ ಸಂಚಾರದಿಂದ ರಸ್ತೆ ಕುಸಿತ ಉಂಟಾಗಿ ಅಪಘಾತ ಕೂಡ ಸಂಭವಿಸುವ ಸಾಧ್ಯತೆ ಇದೆ. ಬಾಳೂರಿನಿಂದ ಕಳಸವರೆಗೆ ವರ್ಷದ ಹಿಂದೆಯಷ್ಟೆ ಈ ರಸ್ತೆಯನ್ನು ಡಾಂಭಾರಿಕರಣ ಮಾಡಲಾಗಿದೆ. ಸಂಚಾರ ಕಡಿತಗೊಳ್ಳುವ ಮುನ್ನ ಹೆದ್ದಾರಿ ಪ್ರಾಧಿಕಾರ ರಸ್ತೆಗೆ ತಡೆಗೋಡೆ ನಿರ್ಮಿಸುವ ಅಗತ್ಯವಿದೆ.