ನವದೆಹಲಿ : ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಅಯೋಧ್ಯೆಯ ಸರಯೂ ನದಿ ತಟದಲ್ಲಿ 100 ಮೀಟರ್ ಎತ್ತರ ಶ್ರೀರಾಮನ ಪ್ರತಿಮೆ ನಿರ್ಮಿಸಲು ಯೋಜನೆ ತಯಾರಿಸಿದೆ. ಉತ್ತರಪ್ರದೇಶ ಧಾರ್ಮಿಕ ಪ್ರವಾಸೋದ್ಯಮ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಅಯೋಧ್ಯೆಯನ್ನು ಜಗತ್ತಿನ ಮುಂದಿಡುವ ಸೃಷ್ಠಿಯಲ್ಲಿ ಸರ್ಕಾರ ಈ ಯೋಜನೆ ರೂಪಿಸಿದೆ. ಈಗಾಗಲೇ ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಪ್ರಸ್ಥಾವನೆಯನ್ನೂ ಸಲ್ಲಿಸಲಾಗದಿಎ. ಕೇಂದ್ರದ ಎನ್’ಜಿಟಿಯಿಂದ ಒಪ್ಪಿಗೆ ಪಡೆಯುವ ಕೆಲಸ ಬಾಕಿ ಇದ್ದು, ರಾಜ್ಯಪಾಲರೂ ಕೂಡ ಈ ಯೋಜನೆಗೆ ಅಂಕಿತ ಹಾಕಿದ್ದಾರೆ.
ಅಯೋಧ್ಯೆಯಲ್ಲಿ ರಾಮನ ಮೂರ್ತಿ ಸ್ಥಾಪಿಸುವ ಉತ್ತರ ಪ್ರದೇಶ ಸರ್ಕಾರದ ಹೊಸ ನಿರ್ಧಾರ ವಿವಾದವನ್ನ ಸೃಷ್ಟಿಸಿದೆ. ಯಾಕಂದರೆ, ಇತ್ತೀಚೆಗಷ್ಟೇ ಉತ್ತರಪ್ರದೇಶ ಪ್ರವಾಸೋದ್ಯಮ ಇಲಾಖೆ ತನ್ನ ಕಿರುಹೊತ್ತಗೆಯಿಂದ ತಾಜ್ ಮಹಲ್ ಅನ್ನ ಕೈಬಿಟ್ಟಿತ್ತು.
ಅಯೋಧ್ಯೆಯನ್ನ ಧಾರ್ಮಿಕ ಪ್ರವಾಸೀ ತಾಣವನ್ನಾಗಿಸಲು ನವ್ಯ ಅಯೋಧ್ಯಾ ಯೋಜನೆ ಸಿದ್ಧಗೊಂಡಿದೆ. ನವ್ಯ ಅಯೋಧ್ಯಾ ಯೋಜನೆಗೆ 195.89 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ಕೇಂದ್ರದ ಪ್ರವಾಸೋದ್ಯಮ ಇಲಾಖೆ ಈ ಯೋಜನೆಗೆ 133 ಕೋಟಿ ರೂ ಹಣ ನೀಡಿದೆ. ಇಂಡೋನೇಷ್ಯಾದ ಬಾಲಿಯಲ್ಲಿ ಇಂತಹ ಬೃಹತ್ ವಿಗ್ರಹಗಳಿದ್ದು ಪ್ರವಾಸಿಗರ ಆಕರ್ಷಣೆಯಾಗಿವೆ. ಇಲ್ಲಿಯೂ ಅಂತಹ ಯೋಜನೆಗಳನ್ನು ರೂಪಿಸುವುದು ಉ.ಪ್ರ. ಸರಕಾರದ ಉದ್ದೇಶವಾಗಿದೆ.