ಮುಂಬೈ: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ನಾಸಾ) ಇನ್ಸೈಟ್ ಮಿಷನ್ ಯೋಜನೆ ಅಡಿ ಮಂಗಳ ಗ್ರಹಕ್ಕೆ ಯಾನ ಕೈಗೊಳ್ಳಲು 1,38,399 ಭಾರತೀಯರು ಟಿಕೆಟ್ಗಳನ್ನು ಕಾಯ್ದಿರಿಸಿದ್ದಾರೆ…! ವಿಶ್ವಾದ್ಯಂತ ನಾಸಾ ಯೋಜನೆಗೆ ಅತ್ಯುತ್ಸಾಹ ವ್ಯಕ್ತವಾಗಿದ್ದು, 24, 29,807 ಮಂದಿ ತಮ್ಮ ಹೆಸರುಗಳನ್ನು ದಾಖಲಿಸಿದ್ದಾರೆ. ನಾಸಾದ ಈ ಮಹತ್ವಾಕಾಂಕ್ಷಿ ಯೋಜನೆಯಡಿ ರೆಡ್ ಪ್ಲಾನೆಟ್(ಕೆಂಪು ಗ್ರಹ) ಯಾನಕ್ಕೆ ಆಸಕ್ತರು ಮುಗಿಬಿದ್ದಿದ್ದಾರೆ. 2018ರ ಮೇ 5ರಂದು ಮಂಗಳನ ಅಂಗಳಕ್ಕೆ ಜಿಗಿಯುವ ಪಯಣಕ್ಕೆ ಚಾಲನೆ ದೊರೆಯಲಿದೆ.
ಮಾರ್ಸ್ ಮಿಷನ್ಗೆ ಅಧಿಕ ಹೆಸರುಗಳನ್ನು ನೋಂದಾಯಿಸಿದ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. 6.76 ಲಕ್ಷ ಜನರೊಂದಿಗೆ ಅಮೆರಿಕ ಮೊದಲ ಅಗ್ರ ಶ್ರೇಯಾಂಕದಲ್ಲಿದ್ದರೆ, ಚೀನಾ (2.62 ಲಕ್ಷ) ಎರಡನೇ ಸ್ಥಾನದಲ್ಲಿದೆ. ಈಗಾಗಲೇ ಟಿಕೆಟ್ಗಳನ್ನು ಕಾಯ್ದಿರಿಸಿದವರಿಗೆ ಆನ್ಲೈನ್ ಮೂಲಕ ಬೋರ್ಡಿಂಗ್ ಪಾಸ್ಗಳನ್ನು ನೀಡಲಾಗುವುದು ಎಂದು ನಾಸಾ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.