2017ರಲ್ಲಿ ರಾಜ್ಯದ ವಿವಿಧೆಡೆ ಮಹಿಳೆಯರ ಮೇಲೆ 3,107 ದೌರ್ಜನ್ಯ ಪ್ರಕರಣ  ದಾಖಲು

410

ಬೆಂಗಳೂರು: 2017ರಲ್ಲಿ ರಾಜ್ಯದ ವಿವಿಧೆಡೆ ಮಹಿಳೆಯರ ಮೇಲೆ 3,107 ದೌರ್ಜನ್ಯ ಪ್ರಕರಣ ದಾಖಲಾಗಿವೆ ಎಂದು ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀಬಾಯಿ ತಿಳಿಸಿದ್ದಾರೆ. ಮಹಿಳಾ ಆಯೋಗದ ವತಿಯಿಂದ 2018ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಂಗಳಿಗೆ ಸರಾಸರಿ 230 ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಸ್ವರೂಪದ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದ ಅವರು ಹಾವೇರಿಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಪ್ರಕರಣಗಳು, ರಾಮನಗರದಲ್ಲಿ ಬಹುಪತ್ನಿತ್ವ, ಮೈಸೂರಿನಲ್ಲಿ ಪ್ರೇಮ ವಿವಾಹದ ನಂತರ ದೌರ್ಜನ್ಯ, ಚಿಕ್ಕಮಗಳೂರಿನಲ್ಲಿ ವಲಸಿಗರ ಮೇಲೆ ಅತ್ಯಾಚಾರ, ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲ, ಕೊಪ್ಪಳದಲ್ಲಿ ಬಾಲ್ಯವಿವಾಹ… ಹೀಗೆ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ದುಡಿಯುವ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆದಿರುವ 72 ಪ್ರಕರಣ ದಾಖಲಾಗಿವೆ ಇದು ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಹೆಚ್ಚಳವಾಗಿದೆ ಎಂದರು