ಹಾಸ್ಟೆಲ್ ವಿದ್ಯಾರ್ಥಿನಿ ಮಾಧುರ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ …

313
firstsuddi

ಹಾಸನ- ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ನ ಹತ್ತನೇ ತರಗತಿ ವಿದ್ಯಾರ್ಥಿನಿ ಮಾಧುರ್ಯ (16) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಹಾಸ್ಟೆಲ್ ನ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಮಾಧುರ್ಯ ಹಾಸ್ಟೆಲ್ ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಜೂನ್ 16ರಂದು ನಾಲ್ಕು ಯುವಕರು ಇದೇ ಹಾಸ್ಟಲ್ ನ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಮತ್ತೊಂದು ಖಾಸಗಿ ಹಾಸ್ಟೆಲ್ ನ ಒರ್ವ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮೈಸೂರಿಗೆ ಪ್ರವಾಸಕ್ಕೆಂದು ಕರೆದೊಯ್ದಿದ್ದು, ಬಳಿಕ ಮೃತ ಬಾಲಕಿ ಹಾಸ್ಟೆಲ್ ಗೆ ಬಂದು ಬಳಿಕ ನಾಪತ್ತೆಯಾಗಿದ್ದಳು. ಈ ಬಗ್ಗೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದು, ಆದರೆ ಹಾಸ್ಟೆಲ್ ನ ಮೇಲ್ಬಾಗದಿಂದ ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿ ನೋಡಿದಾಗ ಹಾಸ್ಟೆಲ್‍ನ ಹಳೆಯ ವಸ್ತುಗಳನ್ನು ಶೇಖರಿಸಿದ್ದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆಯೇ ಬಾಲಕಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹಾಸನದ ಮಹಿಳಾ ಠಾಣೆ ಪೊಲೀಸರು ಬಾಲಕಿಯನ್ನು ಮೈಸೂರಿಗೆ ಕರೆದೊಯ್ದಿದ್ದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ ನಾಲ್ವರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ ಪೊಲೀಸರು ಬಾಲಕಿಯನ್ನು ಕರೆದೊಯ್ದ ದಿನ ಮೈಸೂರಿನಲ್ಲಿ ತಂಗಿದ್ದು. ಮರುದಿನ ಇವರನ್ನು ಹಾಸ್ಟೆಲ್‍ಗೆ ಬಿಟ್ಟು ಹೋಗಿದ್ದರು.ಆದರೆ ವರ್ಡನ್ ಗೆ ವಿಷಯ ಗೊತ್ತಾದರೆ ಕಷ್ಟ ಎಂದು ಮೃತ ಬಾಲಕಿ ಮಾಧುರ್ಯ ಮಾತ್ರ ಜೂನ್ 17 ರಂದು ಹಾಸ್ಟೆಲ್‍ಗೆ ಬಾರದೆ ಮರುದಿನ ಜೂನ್ 18ರ ಬೆಳಿಗ್ಗೆ ಹಾಸ್ಟೆಲ್‍ಗೆ ಬಂದಿದ್ದಳು. ಅಂದು ಶಾಲೆಗೆ ಹೋಗುವುದಾಗಿ ಹಾಸ್ಟೆಲ್ ನಿಂದ ಹೋದ ಮಾಧುರ್ಯ ಮತ್ತೆ ಪತ್ತೆಯಾಗಲಿಲ್ಲ. ಆದರೆ ಹಾಸ್ಟೆಲ್ ನಲ್ಲಿಯೇ ಈ ಶವ ಪತ್ತೆಯಾಗಿರುವುದು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿನ ನಿರ್ಲಕ್ಷ್ಯ ಎದ್ದು ಕಾಣುವಂತೆ ಮಾಡಿದೆ. ಯುನಿಫಾರ್ಮ್ ನಲ್ಲಿಯೇ ಹಾಸ್ಟೆಲ್‍ನ ಮೇಲಿನ ಕೊಠಡಿಯಲ್ಲಿ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳ ಅಥವಾ ಬೇರೆ ಏನಾದ್ರು ಆಗಿದೆಯಾ ಎಂಬ ಬಗ್ಗೆ ಅನುಮನ ಮೂಡಿದೆ.
ಹಾಸ್ಟೆಲ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿರೊ ಆರೋಪಿ ಕೇಳಿಬಂದಿದೆ. ಇನ್ನು ಬಾಲಕಿಯರಿಬ್ಬರು ಬರೆದು ಕೊಟ್ಟಿದ್ದಾರೆ ಎಂದು ಹೇಳುತ್ತಿರೋ ಊರಿಗೆ ತೆರಳಲು ಪರ್ಮಿಷನ್ ಲೆಟರ್ ದಿನಾಂಕವನ್ನು ತಿದ್ದಲಾಗಿದ್ದು, ಇಬ್ಬರು ಬಾಲಕಿಯರ ಸಹಿ ಒಂದೇ ರೀತಿ ಇರೋದು ಕೂಡ ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ಇನ್ನು ಬಾಲಕಿಯರು ಮೈಸೂರಿಗೆ ಹೋದಾಗ ಅವರ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ದು ಇದನ್ನು ಹೇಳಿಕೊಳ್ಳಲು ಆಗದೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹಾಸ್ಟೆಲ್ ವರ್ಡನ್ ಹೇಳಿದ್ದು ಸರ್ಕಾರಿ ಹಾಸ್ಟೆಲ್ ಗಳಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯನ್ನೆ ಪ್ರಶ್ನೆ ಮಾಡುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ ರಾಹುಲ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಹಾಸನ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಬಾಲಕಿಯನ್ನು ಕರೆದೊಯ್ದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸತ್ಯ ಹೊರಬರಬೇಕಿದೆ.