ಎದೆಹಾಲು ಕುಡಿದಿದ್ದರೇ ಬನ್ಸಾಲಿ ಸಿನಿಮಾ ನಿರ್ಮಿಸಲಿ

507

ಉಡುಪಿ:’ಪದ್ಮಾವತಿ’ ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ತಾಯಿಯ ಹಾಲು ಕುಡಿದಿದ್ದೇ ಆಗಿದ್ದರೆ ಮೊಹಮ್ಮದ್ ಪೈಗಂಬರನ ಸಿನಿಮಾ ಮಾಡಲಿ ನೋಡೋಣ ಎಂದು ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಪ್ರವೀಣ್ಭಾಯಿ ತೊಗಾಡಿಯಾ ಬಹಿರಂಗ ಸವಾಲು ಹಾಕಿದ್ದಾರೆ. ವಿಶ್ವ ಹಿಂದೂ ಪರಿಷತ್ನ ಉಡುಪಿ ಧರ್ಮ ಸಂಸದ್ ಅಂಗವಾಗಿ ಎಂಜಿಎಂ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಗವತಿ ಪದ್ಮಾವತಿಯ ಬಲಿದಾನವನ್ನು ತಿರುಚಿದ ‘ಪದ್ಮಾವತಿ’ ಚಿತ್ರ ಪ್ರದರ್ಶನಕ್ಕೆ ಪಂಜಾಬ್ ಕಾಂಗ್ರೆಸ್ ಸರಕಾರ, ರಾಜಸ್ಥಾನದ ಬಿಜೆಪಿ ಸರಕಾರ ನಿರ್ಬಂಧ ಹೇರಿದ್ದು, ಎಲ್ಲ ರಾಜ್ಯಗಳ ಸಹಿತ ಕೇಂದ್ರ ಸರಕಾರ ಕೂಡಲೇ ಪ್ರತಿಬಂಧ ಹೇರಬೇಕು ಎಂದು ಡಾ. ತೊಗಾಡಿಯಾ ಆಗ್ರಹಿಸಿದರು.

ಹಿಂದೂಗಳ ಸ್ವಾಭಿಮಾನ ರಕ್ಷಣೆ ಬಯಸುವ ನಮಗೆ ಯಾವುದೇ ಸಂಸದ, ಶಾಸಕ, ಮಂತ್ರಿ, ಟಾಟಾ/ಬಿರ್ಲಾ ಶ್ರೀಮಂತಿಕೆ ಬೇಡ. ಅಯೋಧ್ಯೆಯ ಗುಡಿಸಲಿನಲ್ಲಿ ರಾಮನಿಗೊಂದು ಮಂದಿರ ನಿರ್ಮಾಣವಾದರಷ್ಟೇ ಸಾಕು. ಉತ್ಖನನದಿಂದ ಮಂದಿರದ ಸಾಕ್ಷ್ಯ ದೊರೆತ ಬಳಿಕ ಸಂಧಾನಕ್ಕೆ ಯಾರೂ ಮುಂದೆ ಬಂದಿಲ್ಲ. ನಮಗೆ ಸಂಧಾನ ಬೇಡ. ಹಿಂದೂಗಳ ಭುಜಬಲದ ಆಧಾರದಲ್ಲಿ ಮಂದಿರ ಮಾಡುತ್ತೇವೆ.
‘ರಾಮಜನ್ಮ ಭೂಮಿ ಮೇ ಕ್ಯಾ ಬನೇಗಾ’ ಎಂದು ಸಭಿಕರನ್ನು ಪ್ರಶ್ನಿಸಿ ‘ಮಂದಿರ್ ಬನೇಗಾ’ ಎನ್ನುವ ಉತ್ತರ ಪಡೆದರು. ಮಂದಿರವನ್ನು ಅಯೋಧ್ಯೆಯಲ್ಲೇ ನಿರ್ಮಿಸುತ್ತೇವೆ ಎನ್ನುವುದು ಸಂತರ ಸಂಕಲ್ಪವಾಗಿದೆ. ದೇಶದಲ್ಲಿ 3.50 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಕೃಷಿ ಸಂಕಷ್ಟ ಸ್ಥಿತಿಯಲ್ಲಿದೆ. ನಿರುದ್ಯೋಗಿಗಳಿಗೆ 10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕು. 1 ಕೋಟಿ ಮಂದಿಗೆ ಮನೆ ನಿರ್ಮಾಣವಾಗಬೇಕು. ಋುಣ ಮುಕ್ತ ರೈತರು, ಬಡತನ ಮುಕ್ತ ಭಾರತ, ಪ್ರಗತಿ ಸಮೃದ್ಧಿಯ ರಾಮ ರಾಜ್ಯವಾಗಬೇಕು. ವಿಹಿಂಪ 50 ಲಕ್ಷ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು ಸಮಾಜ ಸೇವೆಗೆ ಕೈಜೋಡಿಸಿದ 10 ಸಾವಿರ ವೈದ್ಯರ ಪ್ರಮಾಣವನ್ನು 50 ಸಾವಿರಕ್ಕೇರಿಸುವ ಗುರಿಯಿದೆ ಎಂದು ತೊಗಾಡಿಯಾ ಹೇಳಿದರು.

2008ರ ದಾಳಿಕೋರ ಕಸಬ್ನನ್ನು ಕಳುಹಿಸಿದ ಉಗ್ರ ಹಫೀಜ್ ಸಯೀದ್ ಪಾಕ್ನಲ್ಲೇ ಕೂತು ಭಾರತ ವಿರೋಧಿ ಚಟುವಟಿಕೆ ಮುಂದುವರಿಸಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಲಾಡೆನ್ನನ್ನು ಅಮೆರಿಕ ಹೊಸಕಿ ಹಾಕಿದಂತೆ ಪಾಕಿಸ್ತಾನ ನಿರ್ನಾಮದ ದಿನಗಳು ದೂರವಿಲ್ಲ ಎಂದರು. ಇದೇ ಸಂದರ್ಭ ಡಾ. ಪ್ರವೀಣ್ಭಾಯಿ ತೊಗಾಡಿಯಾ ಅವರು ಸಭಿಕರಿಗೆ ಸಂಕಲ್ಪ ಬೋಧಿಸಿದರು. ಜಾಗೃತ, ಸಕ್ರಿಯ ಹಿಂದೂ ಆಗುವ ಮೂಲಕ ನಾವೆಲ್ಲ ಒಂದಾಗಬೇಕು ಎಂದ ಡಾ. ತೊಗಾಡಿಯಾ, ಯುವಕರು ಶಾಂತಿಯಿಂದ ಮನೆಗೆ ಹಿಂತಿರುಗಿದರೆ ಅದುವೇ ಹಿಂದೂ ವಿಜಯ ಎಂದರು. ಬಳಿಕ ಶಾಂತಿ ಮಂತ್ರ ಪಠಿಸಲಾಯಿತು.

LEAVE A REPLY

Please enter your comment!
Please enter your name here