ಮೈಸೂರಿನ ಇಲವಾಲ ಬಳಿ ಬಸ್ ದರೋಡೆ ಪ್ರಕರಣ : ಪೊಲೀಸರು ಸೇರಿ ಎಲ್ಲರೂ ಖುಲಾಸೆ!

614

ಮೈಸೂರು: ಇಲವಾಲ ಬಳಿ ನಡೆದ ಬಸ್ ದರೋಡೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. 2.07 ಕೋಟಿ ರೂ.ಗಳನ್ನು ಪೊಲೀಸರು ದರೋಡೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಇದಾಗಿತ್ತು. ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆದಿತ್ತು. ಪೊಲೀಸ್ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಲಾಗಿತ್ತು. ಪ್ರಕರಣದ ಆರೋಪಿಗಳಾದ ಸಬ್ ಇನ್ಸ್ಪೆಕ್ಟರ್ ಪಿ.ಜಗದೀಶ, ಹೆಡ್ ಕಾನ್ಸ್ಟೆಬಲ್ ಸತೀಶ, ಕಾನ್ಸ್ಟೆಬಲ್ ಗಳಾದ ಅಬ್ದುಲ್ ಲತೀಫ್, ಎನ್.ಎ. ಅಶೋಕ್, ರವಿ, ಬಿ.ಎನ್.ಮನೋಹರ್, ಐಜಿಪಿ ಗನ್ಮ್ಯಾನ್ ಪ್ರಕಾಶ್, ಪೊಲೀಸ್ ಮಾಹಿತಿದಾರರಾದ ಸಲೀಂ, ಷರೀಫ್ ಅವರನ್ನು ಖುಲಾಸೆಗೊಳಿಸಲಾಗಿದೆ.

ಘಟನೆಯ ಹಿನ್ನಲೆ : 2014ರ ಜನವರಿ 4ರ ಮುಂಜಾನೆ ಕೇರಳಕ್ಕೆ ತೆರಳುತ್ತಿದ್ದ ಕಲ್ಪಕಾ ಬಸ್ಸಿನಲ್ಲಿ 2.27 ಕೋಟಿ ಹವಾಲಾ ಹಣ ಇದೆ ಎಂದು ಮಾಹಿತಿ ಸಿಕ್ಕಿತ್ತು. ಪೊಲೀಸರು ಇಲವಾಲಾ ಬಳಿ ಬಸ್ಸನ್ನು ತಡೆದು ತಪಾಸಣೆ ಮಾಡಿದ್ದರು. ಸಿಕ್ಕಿದ ಹಣವನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ, 2.27 ಕೋಟಿ ಹಣದಲ್ಲಿ 2.07 ಕೋಟಿಯನ್ನು ಪೊಲೀಸರು ದರೋಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಎಫ್ಐಆರ್ನಲ್ಲಿ 20 ಲಕ್ಷ ಹಣ ಮಾತ್ರ ಸಿಕ್ಕಿದೆ ಎಂದು ದಾಖಲಿಸಿದ್ದರು. ಬಸ್ಸಿನಲ್ಲಿದ್ದ ಸೈನುಲಬ್ಬೀನ್ ಹಣ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು.