ಚಿಕ್ಕಮಗಳೂರು : ವಿರೋಧದ ನಡುವೆಯೂ ಆಚರಣೆಗೊಳ್ತಿರೋ ಟಿಪ್ಪು ಜಯಂತಿಗೆ ಚಿಕ್ಕಮಗಳೂರಿನ ಜಿಲ್ಲಾ ಬಿಜೆಪಿ ಘಟಕ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. ಶಾಸಕ ಸಿ.ಟಿ.ರವಿ ಹಾಗೂ ನೂರಾರು ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿ ಟಿಪ್ಪು ಜಯಂತಿ ಆಚರಣೆಯ ವಿರುದ್ಧ ಮೆರವಣಿಗೆ ನಡೆಸಲು ಮುಂದಾದ್ರು. ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಹಿನ್ನೆಲೆ ಶಾಸಕ ಸಿ.ಟಿ.ರವಿ ಸೇರಿದಂತೆ ನೂರಾರು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ರು. ಬಿಜೆಪಿ ಕಚೇರಿ ಸುತ್ತಲೂ ನೂರಾರು ಪೊಲೀಸರು ಜಮಾವಣೆಗೊಂಡಿದ್ರು. ಇದೇ ವೇಳೆ ಮಾತನಾಡಿದ ಶಾಸಕ ರವಿ, ಸರ್ಕಾರ ಕೋಮುಗಲಭೆಯನ್ನ ಸೃಷ್ಟಿಸಿ, ರಾಜ್ಯದಲ್ಲಿ ಅಶಾಂತಿ ಸೃಷ್ಠಿಸಿ ಓಟ್ ಬ್ಯಾಂಕ್ ನಿರ್ಮಾಣ ಮಾಡಿಕೊಳ್ಳಲು ಸಂಚು ರೂಪಿಸ್ತಿದೆ. ಇದು ಇತಿಹಾಸ, ಮೈಸೂರು ಅರಸರು, ಕೊಡಗಿನವರಿಗೆ ಮಾಡುವ ಅಪಮಾನ ಎಂದು ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೊಷಣೆ ಕೂಗಿದ್ದಾರೆ.
ಸಿಎಂ ಸಿದ್ದರಾಮಯ್ಯನವರಿಗೆ ಕೆಟ್ಟ ಬುದ್ಧಿ, ಹುಚ್ಚು ಬುದ್ಧಿ ಹೆಚ್ಚಾಗಿ, ಅವರ ತಲೆಯಲ್ಲಿ ಮತಾದಂತೆಯ ಭೂತ ಮೆಟ್ಟಿಕೊಂಡಿದೆ, ಓಟ್ ಬ್ಯಾಂಕ್ ನಿರ್ಮಾಣಕ್ಕಾಗಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದಾರೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ, ನಿಮ್ಮ ಕಣ್ಣಿಗೆ ಟಿಪ್ಪು ಸುಲ್ತಾನ ಹೇಗೆ ದೇಶಭಕ್ತನಾಗಿ ಕಾಣುತ್ತಾನೆ, ಒಂದು ನಿಮಗೆ ಹುಚ್ಚಿಡಿದಿರಬೇಕು ಅಥವ ಮತಾಂದತೆಯ ಭೂತ ಆವರಿಸಿಕೊಂಡಿರಬೇಕೆಂದು ಲೇವಡಿ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ನಡೆಯುವ ವೇಳೆ, ಕನ್ನಡ ವಿರೋಧಿ ಟಿಪ್ಪು ಆಚರಣೆ ಮಾಡುತ್ತಿದ್ದೀರಾ, ನಿಮಗೆ ಹಿಡಿದಿರೋ ಹುಚ್ಚನ್ನ ಬಿಡಿಸಲು ರಾಜ್ಯದ ಜನ ಹೋರಾಟ ಮಾಡಿದ್ರು ಕೂಡ ನಿಮಗೆ ಹುಚ್ಚು ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಟಿಪ್ಪು ಜಯಂತಿ ಆಚರಿಸುವ ಬದಲು ಸರ್ ಮಿರ್ಜಾ ಇಸ್ಮಾಯಿಲ್, ಸಂತ ಶಿಶುನಾಳ ಶರೀಫ್, ಎಲ್ಲಾ ಧರ್ಮ ಹಾಗೂ ಮಕ್ಕಳ ಮನದಲ್ಲಿರೋ ಅಬ್ದುಲ್ ಕಲಾಂ ಜಯಂತಿ ಆಚರಿಸಿ ಎಂದು ಸಲಹೆ ನೀಡಿದ್ದಾರೆ.