ಚಿಕ್ಕಮಗಳೂರು- ಜಯನಗರ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಯುವ ಕಾಂಗ್ರೇಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಜಿಲ್ಲಾ ಕಾಂಗ್ರೇಸ್ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಜಯನಗರ ಕ್ಷೇತ್ರದ ಗೆಲುವು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೇಸ್ ಪಕ್ಷ ಗೆಲ್ಲುವ ದಿಕ್ಸೂಚಿಯಾಗಿದೆ ಎಂದರು. ಮುಂಬರುವ ಲೋಕಸಭಾ ಚುನಾವಣೆಗೆ ಯುವ ಕಾಂಗ್ರೇಸ್ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು, ಶತಾಯಗತಾಯ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್ ಮಾತನಾಡಿ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೇಸ್ ಪಕ್ಷ ಜಯಭೇರಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿದ್ಯಾರ್ಥಿ ಕಾಂಗ್ರೇಸ್ ಅಧ್ಯಕ್ಷ ಆದಿಲ್, ಯುವ ಕಾಂಗ್ರೇಸ್ ಮುಖಂಡರಾದ ಸಚ್ಚಿನ್, ಮಂಜು, ತೌಫಿಕ್, ಪ್ರಣವ್, ಸುಮಂತ್, ಅಮಿತ್, ಸಿ.ಎಸ್.ಸಂದೀಪ್, ಮಂಜುನಾಥ್, ಸುರೇಶ್, ಅಕ್ರಂ ಪಾಶ, ರಿಜ್ವಾನ್ ಹಾಜರಿದ್ದರು.