ಭಯೋತ್ಪಾದಕರ ದಾರಿ ತುಳಿದ 86 ಜನರ ಮನಪರಿವರ್ತನೆ

443

ಮುಂಬಯಿ: ಭಯೋತ್ಪಾದಕ ದಾಳಿಯ ಬಳಿಕ ತಪ್ಪು ದಾರಿ ಹಿಡಿದಿದ್ದ ಯುವ ಜನಾಂಗವನ್ನು ಸರಿದಾರಿಗೆ ತರುವ ನಿಟ್ಟಿನ ಪ್ರಯತ್ನವಾಗಿ ಕಳೆದೆರಡು ವರ್ಷಗಳಲ್ಲಿ 86 ಮಂದಿಯ ಮನಪರಿವರ್ತನೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್)ಯ ಅಧಿಕಾರಿಗಳು ತಿಳಿಸಿದ್ದಾರೆ.
ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಯುವ ದಂಪತಿ, ಒಬ್ಬ ವೈಮಾನಿಕ ಎಂಜಿನಿಯರ್, ಒಬ್ಬ ಐಟಿ ಉದ್ಯೋಗಿ ಸೇರಿದಂತೆ ಅನೇಕ ಸುಶಿಕ್ಷಿತ ಯುವಜನಾಂಗವನ್ನು ಈಗಾಗಲೇ ಮುಖ್ಯವಾಹಿನಿಗೆ ಮರಳಿ ಕರೆತರಲಾಗಿದೆ.
ಜಿಹಾದ್ ಹೆಸರಿನಲ್ಲಿ ದಾರಿತಪ್ಪಿದವರನ್ನು ಮೂಲಭೂತವಾದಿ ಮನಸ್ಥಿತಿಯಿಂದ ಹೊರತಂದು ಸಹಜ ಜೀವನಕ್ಕೆ ಮರಳಿಸಲಾಗಿದೆ ಎಂದು ಎಟಿಎಸ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈ ಪೈಕಿ ಎಂಟು ಮಹಿಳೆಯರೂ ಇದ್ದರು. ಇಂಥವರನ್ನು ಉಗ್ರಗಾಮಿ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಿಸಿ ಅವರ ಮನಸ್ಸಿನಲ್ಲಿ ಮೂಲಭೂತವಾದದ ಬೀಜ ಬಿತ್ತಿದ್ದವು. ಇವರೆಲ್ಲರೂ ಐಸಿಎಸ್ ಸೇರುವ ಸಿದ್ಧತೆಯಲ್ಲಿದ್ದರು. ಅಥವಾ ಅಂತಹ ಸಂಘಟನೆಗಳ ಪರ ಕೆಲಸ ಮಾಡುವ ಯೋಜನೆ ಹಾಕಿಕೊಂಡಿದ್ದರು. ಆದರೆ, ಸದ್ದಿಲ್ಲದೆ ಇಂಥವರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ ಕಾನೂನು ಜಾರಿ ಸಂಸ್ಥೆಗಳು ಅಂತಿಮವಾಗಿ ಇವರೆಲ್ಲರನ್ನೂ ಸಹಜ ಬದುಕಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಉಗ್ರ ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿ ದಾರಿ ತಪ್ಪುವುದರಲ್ಲಿದ್ದ ಇಂಥವರನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಎಟಿಎಸ್ ಅಧಿಕಾರಿಗಳು ಸರಕಾರದ ನೆರವಿನೊಂದಿಗೆ, ಸೂಕ್ತವೆನಿಸುವ ನೌಕರಿಗೆ ತರಬೇತಿ ಕೊಡಿಸುವುದು, ಸ್ವಂತ ವ್ಯಾಪಾರ ಆರಂಭಿಸಲು ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಯೋಜನೆಯಡಿ ಬ್ಯಾಂಕುಗಳಿಂದ ಸಣ್ಣ ಸಾಲ ಕೊಡಿಸುವುದು ಮುಂತಾದ ಮಹತ್ವದ ಹೆಜ್ಜೆಗಳನ್ನಿಟ್ಟಿದ್ದಾರೆ. ಆ ಮೂಲಕ ಉಗ್ರಗಾಮಿತ್ವ ತೊರೆದು ಮುಖ್ಯವಾಹಿನಿಗೆ ಮರಳುವ ಮಂದಿ ಸಮಾಜದಲ್ಲಿ ಘನತೆ ಹಾಗೂ ಗೌರವದಿಂದ ಬಾಳುವಂತಾಗಲಿ ಎಂಬುದು ಎಟಿಎಸ್ ಲೆಕ್ಕಾಚಾರವಾಗಿದೆ.

LEAVE A REPLY

Please enter your comment!
Please enter your name here