ತಾಯಿ-ಮಗು ಮರಣ ಪ್ರಮಾಣ ನಿಯಂತ್ರಿಸಿ ಕಾಳಜಿವಹಿಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ

1698

ಹಾಸನ : ಜಿಲ್ಲೆಯಲ್ಲಿ ಪ್ರಸವ ಸಂದರ್ಭದಲ್ಲಿ ತಾಯಿ-ಮಗು ಮರಣ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ರೀತಿಯ ಆಗತ್ಯ ಕ್ರಮ ಹಾಗೂ ಹೆಚ್ಚಿನ ಕಾಳಜಿವಹಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾಯಿ ಮತ್ತು ಶಿಶು ಮರಣ ಪರಿಶೀಲನಾ ಸಭೆ ನಡೆಸಿದ ಅವರು ಇಷ್ಟೇಲ್ಲಾ ವೈದ್ಯಕೀಯ ಸೌಲಭ್ಯಗಳಿದ್ದು, ತಂತ್ರಜ್ಞಾನ ಮುಂದುವರೆದರು ತಾಯಿ ನವಜಾತ ಶಿಶು ಮರಣ ತಡೆಯಲು ವಿಫಲವಾಗುತ್ತಿರುವುದು ವಿಷಾದನೀಯ. ಸಮಸ್ಯೆಯ ನಿಖರತೆ ಅರಿತು ಸಕಾಲದಲ್ಲಿ ಚಿಕಿತ್ಸೆ ನೀಡಿ ಎಂದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಪ್ರಸವ ತಜ್ಞರು ಹಾಗೂ ಮಕ್ಕಳ ತಜ್ಞರಿಗೆ ಸೂಚನೆ ನೀಡಿದರು.

ನಿರ್ಲಕ್ಷ ಹಾಗೂ ತಪ್ಪು ಚಿಕಿತ್ಸೆಯಿಂದ ಯಾವುದೇ ತಾಯಿ ಮಗುವಿನ ಮರಣ ಸಂಭವಿಸಬಾರದು. ಗ್ರಾಮೀಣ ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ತಜ್ಞ ವೈದ್ಯರ ಮೂಲಕವೇ ಚಿಕಿತ್ಸೆ ಪಡೆಯಲು ಅಗತ್ಯ ಮಾರ್ಗದರ್ಶನ ನೀಡಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯ, ಸಾಧನ, ಸಲಕರಣೆಗಳನ್ನು ಮೇಲ್ದರ್ಜೆಗೆ ಏರಿಸಬೇಕು, ಪ್ರಸವ ಕೊಣೆಗೆ ಹೊಂದಿಕೊಂಡತೆ ಗರ್ಭಿಣಿ ಮಹಿಳೆಯರ ಮಾನಸಿಕ ಒತ್ತಡ ಹಾಗೂ ನೋವು ತಡೆಯಲು ಅಗತ್ಯವಿರುವ ಪ್ರಶಾಂತ ವಾತಾವರಣವಿರುವ ಕೊಠಡಿಯೊಂದನ್ನು ಪ್ರತ್ಯೇಕವಾಗಿ ಕಾಯ್ದಿರಿಸಿ ಲಘು ಸಂಗೀತ ಹಾಗೂ ಇತರೆ ಪೂರಕ ವ್ಯವಸ್ಥೆ ಕಲ್ಪಿಸಿ ಇದೇ ರೀತಿ ನವಜಾತ ಶಿಶು ಚಿಕಿತ್ಸಾ ಘಟಕವನ್ನು ಉನ್ನತಿಕರಿಸಿ ಎಂದು ಜಿಲ್ಲಾಧಿಕಾರಿಯವರು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಶಂಕರ್ ಹಾಗೂ ಇತರೆ ವೈದ್ಯರಿಗೆ ಹೇಳಿದರು.

ಸಭೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಅಸುನೀಗಿದ ತಾಯಿ ಹಾಗೂ ಶಿಶುವಿನ ಪೋಷಕರು ಹಾಗೂ ವೈದ್ಯಧಿಕಾರಿಗಳ ಬಳಿ ಸಾವಿಗೆ ನಿಖರ ಕಾರಣಗಳೇನು ಎಂಬುದರ ಬಗ್ಗೆ ಜಿಲ್ಲಾಧಿಕಾರಿ ವರದಿ ಪಡೆದು ಕಳೆದ ಎರಡು ತಿಂಗಳಿಂದ ಯಾವುದೇ ತಾಯಿ ಮರಣ ಸಂಭವಿಸದೇ ಇರುವ ಬಗ್ಗೆ ಜಿಲ್ಲಾಧಿಕಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿಯಬೇಕು ಎಂದರು. ಶಿಶು ಮರಣ ಪ್ರಮಾಣ ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಅ. ೯ ರಂದು ಸಭೆ ನಡೆಸಲಾಗುವುದು. ಅ ಸಭೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನು ರಾಜ್ಯದಲ್ಲಿಯೇ ಮಾದರಿಯಾಗುವಂತೆ ಒದಗಿಸಲು ಪೂರಕ ನಿರ್ಧಾರಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು.

ಎಲ್ಲಾ ತಾಲ್ಲೂಕು ಹಾಗೂ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಈ ಮಾಸಾಂತ್ಯದೊಳಗೆ ರಕ್ತಕಣ ಗಣಕ ಘಟಕಗಳನ್ನು ಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆದಷ್ಟು ಬೇಗನೆ ಡಯಾಲಿಸಿಸ್ ಕೇಂದ್ರಗಳು ಕಾರ್ಯಾರಂಭ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ:ಶಂಕರ್, ನವಜಾತ ಶಿಶು ತಜ್ಞರಾದ ಡಾ|| ಕುಮಾರ್ ಹಾಗೂ ಮನು ಪ್ರಕಾಶ್ ಅವರು ಮಾತನಾಡಿ ಜಿಲ್ಲಾ ಆಸ್ಪತ್ರೆಯಲ್ಲಿರುವ ನವಜಾತ ಶಿಶು ಚಿಕಿತ್ಸಾ ಘಟಕದಲ್ಲಿ ಸುಸಜ್ಜಿತ ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ ಶೀಘ್ರದಲ್ಲಿಯೇ ಇದು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದರು.

ನವೆಂಬರ್ ೧೪ ರಂದು ಈ.ಎನ್.ಐ.ಸಿ.ಯು ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯರ ತಪಾಸಣೆಗೆ ಅಗತ್ಯವಿರುವ ಸ್ಕ್ಯಾನಿಂಗ್ ಯಂತ್ರವನ್ನು ಖರೀದಿಸಿದ ಕೆಲವೇ ದಿನಗಳಲ್ಲಿ ಇದರ ಅನುಕೂಲ ಸಾರ್ವಜನಿಕರಿಗೆ ದೊರೆಯಲಿದೆ ಎಂದರು. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಜನಾರ್ಧನ್ ಅವರು ತಾಯಿ ಮತ್ತು ಶಿಶು ಮರಣದ ಬಗ್ಗೆ ಮಾಹಿತಿ ನೀಡಿದ ಅವರು ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ಚಿಕಿತ್ಸಾ ಸೌಲಭ್ಯವನ್ನು ಇನ್ನಷ್ಟು ಉನ್ನತೀಕರಿಸಲು ಇರುವ ಅವಕಾಶಗಳ ಬಗ್ಗೆ ಗಮನ ಸೆಳೆದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ|| ನಾಗೇಶ್ ಅಗತ್ಯವಿರುವ ಜಿಲ್ಲೆಯ ಸುಮಾರು ೪೫೦ ಖಾಸಗಿ ವೈದ್ಯಕೀಯ ತಪಾಸಣಾ ಕೇಂದ್ರಗಳು ಆಸ್ಪತ್ರೆಗಳಿವೆ ಅದರಲ್ಲಿ ೧೫೦ ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳಿಂದ ಮಾತ್ರ ಕಫ ಪರೀಕ್ಷೆ ವರದಿಗಳು ಬರುತ್ತಿವೆ. ಇದರಿಂದ ಕ್ಷಯ ರೋಗಿಗಳ ನಿಖರ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಸರ್ಕಾರಿ ಆಸ್ಪತ್ರೆಗಳ ವರದಿ ಪ್ರಕಾರ ೯೭೨ ಕ್ಷಯರೋಗಿಗಳು ಇದ್ದು ಅವರಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ವಿವಿಧ ತಾಲ್ಲೂಕು ವೈದ್ಯಧಿಕಾರಿಗಳು, ಯೋಜನಾ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here