ಮೂಡಿಗೆರೆ : ಪ್ರಧಾನಿ ಮೋದಿ, ಮಾಸ್ಟರ್ ಮೈಂಡ್ ಅಮಿತ್ ಶಾ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿಯನ್ನೇ ಅಧಿಕಾರಕ್ಕೆ ತರಲು ಹಪಹಪಿಸುತ್ತಿದ್ದಾರೆ. ಇತ್ತ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳ್ಕೊಂಡು ಅತಂತ್ರರಾಗಿ ಸರ್ಕಾರ ಉರುಳಿಸೋಕೆ ಶತಪ್ರಯತ್ನ ನಡೆಸ್ತಿದ್ದಾರೆ. ಆದರೆ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಸವಳಲು ಕೂಡಿಗೆ ಸಮೀಪವಿರುವ ಹಾಲೂರು ಗ್ರಾಮದ ರೈತರೊಬ್ಬರು ಈ ಮೂವರನ್ನು ತಮ್ಮ ಜಮೀನು ಕಾಯಲು ಬಿಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬಂದವರು ಬರೀಗೈಲಿ ಹೋಗ್ಬಾರ್ದೆಂದು ಬಂದವರೆಲ್ಲಾ ತಮ್ಮ ನಾಯಕರ ಭಾವಚಿತ್ರದ ಕಟೌಟ್‍ಗಳನ್ನ ತಗೊಂಡು ಹೋಗಿದ್ದರು. ಅಂದು ರೈತರು ತಲೆಮೇಲೆ ಹೊತ್ತುಕೊಂಡು ಹೋದ ಮೋದಿ, ಅಮಿತ್ ಶಾ, ಯಡಿಯೂರಪ್ಪನನ್ನ ಹೊಲ-ಗದ್ದೆ ಕಾಯಲು ಬಿಟ್ಟಿದ್ದಾರೆ. ಮಳೆ ಚೆನ್ನಾಗಿ ಆಗಿರೋದ್ರಿಂದ ಹೊಲ-ಗದ್ದೆಗಳಲ್ಲಿ ನಾಟಿ ಮಾಡಿದ್ದಾರೆ. ಭತ್ತದ ಮಡಿಗಳನ್ನ ಪ್ರಾಣಿ-ಪಕ್ಷಿಗಳು ತಿನ್ನುತ್ತಿವೆ. ಅದಕ್ಕಾಗಿ ಇವರೆಲ್ಲಾ ಇರೋದು ನಮ್ಮ ಉದ್ಧಾರಕ್ಕೆ ಈಗಾದ್ರು ನಮ್ಮ ಉದ್ದಾರ ಮಾಡಲಿ ಎಂದು ಪ್ರಾಣಿ ಪಕ್ಷಿಗಳಿಗೆ ಹೆದರಿಸೋಕೆ ಇವರನ್ನೆಲ್ಲಾ ಕಾವಲು ಬಿಟ್ಟಿದ್ದಾರೆ. ಆದ್ರೆ, ಕೆಲ ಪಕ್ಷಿಗಳು ಇವರನ್ನ ನೋಡಿ ಇವರು ಮೋದಿ, ಅಮಿತ್ ಶಾ, ಯಡಿಯೂರಪ್ಪರಂತೆ ಅಷ್ಟೆ, ಅವರೇ ಅಲ್ಲ ಎಂದು ಅವರ ಹೆಗಲ ಮೇಲೆ ಕೂರ್ತಿವೆ.