ಚಿಕ್ಕಮಗಳೂರು : ಕಾಫಿ ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾಳುಮೆಣಸು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಆಮದು ನೀತಿಯಿಂದಾಗಿ ಕಾಳುಮೆಣಸಿನ ಬೆಲೆ ನೆಲಕಚ್ಚಿದ್ದು, ಬೆಳೆಗಾರರ ಬೆನ್ನಿಗೆ ಬರೆ ಹಾಕಿದಂತಾಗಿದೆ ಎಂದು ಹೇಳಿಕೆಯಲ್ಲಿ ಅವರು ಆರೋಪಿಸಿದ್ದಾರೆ.
ಕಾಳುಮೆಣಸು ಆಮದಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದಾಗಿ ಹೊರ ದೇಶಗಳಿಂದ ಕಾಳುಮೆಣಸು ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮದಾಗುತ್ತಿದೆ, ಇದರಿಂದಾಗಿ ಸ್ಥಳೀಯ ಕಾಳುಮೆಣಸನ್ನು ಕೇಳುವವರು ಇಲ್ಲದಂತಾಗಿ ಆಂತರಿಕ ಮಾರುಕಟ್ಟೆ ಕುಸಿದಿದೆ ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರದ ಆಮದು ನೀತಿಯಿಂದಾಗಿ ಕಾಳುಮೆಣಸಿನ ಬೆಲೆ 750 ರೂನಿಂದ 350 ರೂಗೆ ಕುಸಿದಿದೆ, ಮಳೆಯ ಏರುಪೇರಿನಿಂದಾಗಿ ಈಗಾಗಲೇ ಈ ಬಾರಿ ಕಾಫಿ ಬೆಳೆ ನಾಶವಾಗುವ ಆತಂಕದಲ್ಲಿ ಬೆಳೆಗಾರರಿದ್ದಾರೆ, ಕಾಫಿ ಬೆಲೆ ಸಹ ಕುಸಿದಿರುವುದರಿಂದಾಗಿ ಪಡೆದ ಸಾಲ ತೀರಿಸುವುದು ಹೇಗೆಂಬ ಚಿಂತೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಬುಧವಾರ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿರುವ ಯು.ಹೊಸಳ್ಳಿಯ ರೈತರಿಗೆ ಜಿಲ್ಲಾಡಳಿತ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಗರದ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಮಂಗಳೂರಿಗೆ ತೆರಳುವಂತೆ ವೈದ್ಯರು ಸೂಚಿಸಿದ್ದಾರೆ ಆದರೆ ಕಡುಬಡವರಾಗಿರುವುದರಿಂದಾಗಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಅವರ ಬಳಿ ಹಣವಿಲ್ಲ ಎಂದಿರುವ ಅವರು ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.