ಚಿಕ್ಕಮಗಳೂರು – ವ್ಯಾಸ ಪೌರ್ಣಮಿ ಪ್ರಯುಕ್ತ ನಗರದ ಗೃಹಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಮಹೋತ್ಸವವನ್ನು ಸಹಸ್ರಾರು ಭಕ್ತರ ನಡುವೆ ಶುಕ್ರವಾರ ವೈಭವದಿಂದ ಆಚರಿಸಲಾಯಿತು.ಉತ್ಸವದ ಅಂಗವಾಗಿ ಬೆಳಗಿನ ಜಾವ ಶ್ರೀ ಶಿರಡಿ ಸಾಯಿಬಾಬಾ ಅವರ ವಿಗ್ರಹಕ್ಕೆ ಕಾಕಡಾರತಿ, ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಿತು.ಇದೇ ವೇಳೆ ಭಕ್ತರಿಂದ ಭಜನೆ, ಸ್ತ್ರೋತ್ರ ಪಠಣ, ನಾಮ ಸಂಕೀರ್ತನೆ ನಡೆಯಿತು, ಮಧ್ಯಾಹ್ನ ಧೂಪಾರತಿ, ಶೇಜಾರತಿ, ಮಹಾಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಶಾಸಕ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ, ನಗರ ಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದರು.ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಬೆಳಗಿನಿಂದ ರಾತ್ರಿಯವರೆಗೆ ಸರತಿ ಸಾಲಿನಲ್ಲಿ ತೆರಳಿ ಶ್ರೀ ಶಿರಡಿ ಸಾಯಿಬಾಬಾ ಅವರ ಮೂಲ ವಿಗ್ರಹದ ಪಾದವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಿದರು.