• ರಾಘವೇಂದ್ರ ಕೆಸವಳಲು
ಮೂಡಿಗೆರೆ : ವಯಸ್ಸು 12 ವರ್ಷ. ಓದುತ್ತಿರೋದು 6ನೇ ತರಗತಿ. ಈ ವಯಸ್ಸಿಗೆ ಪರಿಸರದ ಮೇಲೆ ಅಗಾಧವಾದ ಕಾಳಜಿ. ಪರಿಸರ ಅಂದ್ರೇನು ಅಂತಾನೆ ಗೊತ್ತಿಲ್ಲದ ವಯಸ್ಸಲ್ಲಿ ಇನ್ನೂರಕ್ಕೂ ಅಧಿಕ ಗಿಡಗಳನ್ನ ನೆಟ್ಟು ಪರಿಸರದ ಅಗತ್ಯತತೆಯನ್ನ ನಾಡಿನೆಲ್ಲೆಡೆ ಪಸರಿಸುತ್ತಿದ್ದಾಳೆ ಹನಿ ಎಂಬ ಬಾಲಕಿ. ಹೌದು, ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ರತನ್ ಹಾಗೂ ಪವಿತ್ರರವರ ಪುತ್ರಿ ಈ ಹನಿ. ಮೂಡಿಗೆರೆಯ ಹೊಸಕೆರೆಯಲ್ಲಿ ಹುಟ್ಟು ಬೆಳೆದ ರತನ್ ಉದ್ಯೋಗದ ನಿಮಿತ್ತ ಮಂಗಳೂರಿನ ಜಪ್ಪಿನ್ ಮೊಗರು ಎಂಬಲ್ಲಿ ನೆಲೆಸಿದ್ದಾರೆ. ಅಪ್ಪ-ಅಮ್ಮನಿಗಿರೋ ಈ ಪರಿಸರ ಕಾಳಜಿಯೇ ಈ ಪುಟ್ಟ ಬಾಲಕಿಗೂ ಎಳೆವಯಸ್ಸಿನಲ್ಲೇ ಬಂದಿದೆ. ಈಕೆ ಈ ಆಡೋ ವಯಸ್ಸಲ್ಲೇ ಹಲವು ಸನ್ಮಾನಗಳಿಗೆ ಅಣಿಯಾಗಿದ್ದಾಳೆ. ಯಾಕಂದ್ರೆ, ಅಪ್ಪ ಕೊಡೋ ಪಾಕೇಟ್ ಮನಿಯನ್ನ ಜೋಡಿಸಿ ಗ್ರೀನ್ ವಾರಿಯರ್ಸ್ ಎಂಬ ತಂಡ ಕಟ್ಟಿಕೊಂಡು ಸ್ವಚ್ಛ ಮಂಗಳೂರು ಎಂಬ ಕಾರ್ಯಕ್ರಮ ಮಾಡ್ತಿದ್ದಾಳೆ. ಆರಂಭದಲ್ಲಿ ಐದು ಜನ ಇದ್ದ ಈ ತಂಡದಲ್ಲಿ ಇಂದು ಮುವತ್ತೈದು ಜನರಿದ್ದಾರೆ. ಎಲ್ಲರೂ ಮಕ್ಕಳೆ. ಸ್ಚಚ್ಛ ಮಂಗಳೂರು ಎಂಬ ಕಾರ್ಯಕ್ರಮದಡಿ ರಜಾ ದಿನಗಳಲ್ಲಿ 50-60 ಚೀಲದಷ್ಟು ಪ್ಲಾಸ್ಟಿಕ್ಗಳನ್ನ ಆಯ್ದು ನಗರವನ್ನ ಶುಚಿ ಮಾಡ್ತಾರೆ. ಇದರ ಜೊತೆ ಬಳಸಿ ಹಳೆಯದಾದ ಬಟ್ಟೆಗಳನ್ನ ಮನೆ-ಮನೆಗೆ ತೆರಳಿ ಬಟ್ಟೆ, ಪುಸ್ತಕ, ಆಟಿಕೆಗಳು ಸೇರಿದಂತೆ ವಿವಿಧ ರೀತಿಯ ದಿನಬಳಕೆ ವಸ್ತುಗಳನ್ನ ಸಂಗ್ರಹಿಸಿ ಅಗತ್ಯವಿರುವವರಿಗೆ ನೀಡ್ತಾರೆ. ಈಕೆಗೆ ಮಂಗಳೂರನ್ನ ಸದಾ ಹಚ್ಚ ಹಸಿರಿನ ಮುತ್ತೈದೆಯಂತಿರೋ ಮೂಡಿಗೆರೆಯನ್ನಾಗಿಸಬೇಕು ಅನ್ನೋದು ಈಕೆಯ ಜೀವನದ ಮುಖ್ಯ ಗುರಿ. ಅದಕ್ಕಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಮನೆ-ಮನೆಗೆ ತೆರಳಿ ಪಟಾಕಿ ಹೊಡೆಯದಂತೆ ಎಚ್ಚರಿಸಿ, ಪ್ರತಿ ಮನೆಗೂ ಒಂದೊಂದು ದೀಪ ಕೊಟ್ಟು ಅವರ ಮನವೊಲಿಕೆ ಮಾಡ್ತಾಳೆ. ಈ ಬಾಲಕಿಯ ಮತ್ತಷ್ಟು ಒಳ್ಳೆ ಕೆಲಸಗಳ ಬಗ್ಗೆ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳೂ ಬಂದಿವೆ. ಮುಂದಿನ ಸಂಚಿಕೆಯೂ ಜುಲೈ 29ರಂದು ಪ್ರಸಾರಗೊಳ್ಳಲಿದೆ.

ಇಷ್ಟೆಲ್ಲಾ ಮಾಡೋ ಈ ಬಾಲಕಿ ಓದಿನಲ್ಲೂ ಫಸ್ಟ್. ಓದಿನ ಜೊತೆಗೆ ಭರತನಾಟ್ಯ, ಸಂಗೀತ, ಕರಾಟೆಯನ್ನೂ ಕಲಿಯುತ್ತಿದ್ದಾಳೆ. ಇವಳ ಸಾಧನೆಯನ್ನ ಗುರುತಿಸಿರೋ ಮಂಗಳೂರಿನ ಎಂ.ಆರ್.ಪಿ.ಎಲ್. ಕಂಪನಿ ಹಾಗೂ ಮಂಗಳೂರು ಯುವಕರ ಸಂಘ ಕೂಡ ಈಕೆಯನ್ನ ಸನ್ಮಾನಿಸಿದೆ. ಮಂಗಳೂರಿನ ಹಲವು ಶಾಲೆಯ ಮಕ್ಕಳು ಕೂಡ ಈಕೆಯನ್ನ ತಮ್ಮ ಶಾಲೆಗೆ ಕರೆಸಿ ಮಕ್ಕಳ ಮಾತು ಮಕ್ಕಳಿಗೆ ಬೇಗ ಮನವರಿಕೆಯಾಗುತ್ತೆಂಬ ಕಾರಣಕ್ಕೆ ಈಕೆಯಿಂದ ಗಿಡ ನಡೆಸಿ, ಮಕ್ಕಳಿಗೆ ಪರಿಸರದ ಬಗ್ಗೆ ಈಕೆಯಿಂದಲೇ ಟೀಚ್ ಮಾಡಿಸಿದ್ದಾರೆ.
ಇಷ್ಟೆಲ್ಲಾ ಸಾಧನೆ ಮಾಡಿರೋ ಹನಿಯನ್ನ ಫಸ್ಟ್ ಸುದ್ದಿ ಸಂದರ್ಶನ ನಡೆಸಿದಾಗ ಆಕೆಯ ಮಾತುಗಳು ಪ್ರಸ್ತುತ ಜಗತ್ತಿಗೆ ತುಂಬಾ ಅನಿವಾರ್ಯ ಅನ್ನಿಸಿದೆ. ಯಾಕಂದ್ರೆ, ಈಕೆಯ ಉತ್ತರ ಹಾಗೇ ಇತ್ತು. ನನಗೆ ಮೂಡಿಗೆರೆ ಅಂದ್ರೆ ತುಂಬಾ ಇಷ್ಟ. ಅಲ್ಲಿನ ಗಿಡ-ಮರಗಳು ಅಂದ್ರೆ ಪ್ರಾಣ. ಆದ್ರೆ,ಅಪ್ಪ ಅಮ್ಮ ಮಂಗಳೂರಿನಲ್ಲೇ ಇರೊದ್ರಿಂದ ನಾನು ಇಲ್ಲೇ ಇದ್ದೇನೆ ಎಂದು ಬೇಜಾರು ಧ್ವನಿಯಲ್ಲೇ ಮಾತನಾಡ್ತಾಳೆ. ಆದ್ರೆ, ನನಗೆ ಮಂಗಳೂರನ್ನ ಮೂಡಿಗೆರೆ ಮಾಡ್ಬೇಕು ಅನ್ನೋ ಹೆಬ್ಬಯಕೆ ಈಕೆಯದ್ದು.
ದೊಡ್ಡವಳಾದ ಮೇಲೆ ಏನಾಗ್ತಿಯ ಎಂಬ ಪ್ರಶ್ನೆಗೆ, ನಾನು ದೊಡ್ಡವಳಾದ ಮೇಲೆ ಮೊದಲು ದೇಶದ ಉತ್ತಮ ಪ್ರಜೆಯಾಗ್ತೀನಿ, ಆಮೇಲೆ ದೇಶದ ಅಭಿವೃದ್ಧಿಗೋಸ್ಕರ ಶ್ರಮಿಸುವಂತ ಹುದ್ದೆಗೆ ಹೋಗಬೇಕು ಅನ್ನೋ ಕನಸು ಕಂಡಿರೋ ಈಕೆಗೆ ಅಬ್ದುಲ್ ಕಲಾಂ ಅವರೇ ರೋಲ್ ಮಾಡೆಲ್. ಶಾಲೆಯ ರಜಾ ದಿನಗಳಲ್ಲಿ ಏನ್ ಮಾಡ್ತೀಯಾ ಎಂಬ ಪ್ರಶ್ನೆಗೆ, ರಜಾ ದಿನಗಳಲ್ಲಿ ನೆಟ್ಟಿದ್ದ ಗಿಡಗಳನ್ನ ಆರೈಕೆ ಮಾಡ್ತೀನಿ ಅಂತಾಳೆ. ಆರಂಭದಲ್ಲಿ ಐವರು ಇದ್ದ ಗ್ರೀನ್ ವಾರಿಯರ್ಸ್ ಮಕ್ಕಳ ತಂಡ ಈಗ ಮಂಗಳೂರಿನ ಎಲ್ಲಾ ಭಾಗಗಳಿಂದಲೂ ಮಕ್ಕಳು ಸೇರಿಕೊಂಡಿದ್ದು ಈಗ ಮುವತ್ತೈದು ಮಕ್ಕಳ ತಂಡವಾಗಿದೆ.
ಗಿಡಗಳನ್ನ ಹೇಗೆ ತರ್ತೀಯಾ ಹಣ ಎಲ್ಲಿಂದ ಬರುತ್ತೆ ಎಂಬ ಪ್ರಶ್ನೆಗೆ, ಅಪ್ಪ-ಅಮ್ಮ ಕೊಡೋ ಪಾಕೇಟ್ ಮನಿಯನ್ನ ಸಂಗ್ರಹಿಸಿ ಗಿಡಗಳನ್ನು ತರ್ತೇನೆ. ನನ್ನ ಫ್ರೆಂಡ್ಸ್ಗೂ ಅದನ್ನೇ ಹೇಳ್ತೇನೆ. ಯಾರು ಚಾಕಲೇಟ್ ತಿನ್ಬೇಡಿ. ಅದೇ ದುಡ್ಡಲ್ಲಿ ಗಿಡಿ ನೆಟ್ಟರೆ ಅದು ನಮಗೆ ಒಳ್ಳೆಯ ಪರಿಸರ, ಗಾಳಿ, ಮಳೆ-ಬೆಳೆ ಸೇರಿದಂತೆ ಉತ್ತಮ ಜೀವನ ನೀಡುತ್ತೆ ಎಂದು ಮಕ್ಕಳಿಗೆ ಮನವೊಲಿಸ್ತಾಳೆ.

ನಿಜಕ್ಕೂ ಈಕೆಯ ಸಾಧನೆ, ಸಿದ್ಧಾಂತ, ಯೋಚನೆಗೆ ನಮ್ಮದೊಂದು ಹ್ಯಾಟ್ಸಾಫ್. ಈಕೆಗಿಂತ ಹೆಚ್ಚಾಗಿ ಈಕೆಯ ಅಪ್ಪ-ಅಮ್ಮನಿಗೆ ಶಹಬ್ಬಾಸ್ ಅನ್ಬೇಕು. ಯಾಕಂದ್ರೆ, ಆಧುನಿಕ ಸಮಾಜದಲ್ಲಿ ಹೆತ್ತವರು ಓದು-ಓದು ಅನ್ನೋರೆ ಹೆಚ್ಚು. ಆದ್ರೆ, ಈಕೆಗೆ ಈ ಎಳೆ ವಯಸ್ಸಲ್ಲೇ ಈಕೆಯ ಆಸೆಗಳಿಗೆ ಬೆನ್ನೆಲುಬಾಗಿರೋ ಈಕೆಯ ಅಪ್ಪ-ಅಮ್ಮ ರತನ್ ಹಾಗೂ ಪವಿತ್ರಾಗೆ ಫಸ್ಟ್ ನ್ಯೂಸ್ ವತಿಯಿಂದ ಅಭಿನಂದನೆ ಸಲ್ಲಿಸುತ್ತಾ, ಹನಿಯ ಮುಂದಿನ ಭವಿಷ್ಯ ಕೂಡ ಉತ್ತಮವಾಗಿರಲಿ ಎಂದು ಹಾರೈಸುತ್ತೇವೆ ಬೆಸ್ಟ್ ಆಫ್ ಲಕ್ ಹನಿ………