ಚಿಕ್ಕಮಗಳೂರು : ಮಳೆಯಿಂದಾದ ಅನಾಹುತಗಳ ವರದಿ ನೀಡದ ರೆವಿನ್ಯೂ ಇನ್ ಸ್ಪೆಕ್ಟರ್ ರನ್ನ ಜಿಲ್ಲಾಧಿಕಾರಿ ಅಮಾನತು ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ. ಮಳೆಯಿಂದ ಮಲೆನಾಡು ಅಕ್ಷರಶಃ ಜಲಾವೃತಗೊಂಡಿತ್ತು. ಕಾಫಿ, ಅಡಿಕೆ, ಮೆಣಸು ಮಳೆ ನೀರಲ್ಲಿ ಕೊಚ್ಚಿ ಹೋಗಿ ಸಾಕಷ್ಟು ಪ್ರಮಾಣದ ನಷ್ಟವೂ ಸಂಭವಿಸಿತ್ತು. ಕೊಪ್ಪ ತಾಲೂಕಿನ ಅಲ್ಲಲ್ಲೇ ಭೂಕುಸಿತ ಉಂಟಾಗಿ, ಭೂಮಿ ಬಾಯ್ಬಿಟ್ಟಿದ್ದು ಮಲೆನಾಡಿಗರು ಆತಂಕದಲ್ಲಿ ಜೀವನ ಮಾಡ್ತಿದ್ದಾರೆ. ಇಂತಹಾ ಸಂದರ್ಭದಲ್ಲಿ ಹರಿಹರಪುರ ರೆವಿನ್ಯೂ ಇನ್ ಸ್ಪೆಕ್ಟರ್ ಇಫ್ತಿಕಾರ್ ಮಳೆಯಿಂದಾದ ಅನಾಹುತಗಳ ಬಗ್ಗೆ ವರದಿ ನೀಡದ ಹಿನ್ನೆಲೆ ರೆವಿನ್ಯೂ ಇನ್ ಸ್ಪೆಕ್ಟರ್ ಇಫ್ತಿಕಾರ್ ರನ್ನು ಜಿಲ್ಲಾಧಿಕಾರಿ ಶ್ರೀರಂಗಯ್ಯ ಅಮಾನತು ಮಾಡಿದ್ದಾರೆ. ಜಿಲ್ಲಾಧಿಕಾರಿ ನೆರೆಗೆ ತುತ್ತಾದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಆರ್.ಐ. ಗೈರಾಗಿದ್ದು, ಮಳೆಯ ಅನಾಹುತಗಳ ಬಗ್ಗೆ ಸೂಕ್ತ ವರದಿ ನೀಡದ ಹಿನ್ನೆಲೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.