ಮೂಡಿಗೆರೆ : ಕಳಸ ಹೋಬಳಿಯಾದ್ಯಂತ ಪುನರ್ವಸು ಮಳೆಯ ಆರ್ಭಟ ಮುಂದುವರೆದಿದ್ದು,ಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನಜೀವ ಅಸ್ತವ್ಯಸ್ತವಾಗಿದೆ. ಕಳೆದ ನಾಲ್ಕು ದಿನಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿತ್ತು.ಆದರೆ ಬುಧವಾರ ಬೆಳಿಗ್ಗೆಯಿಂದ ಮಳೆಯು ಇನ್ನಷ್ಟು ಬಿರುಸುಗೊಂಡ ಹಿನ್ನಲೆಯಲ್ಲಿ ಕಳೆದ ಇಪ್ಪತೈದು ದಿನಗಳ ಹಿಂದೆ ಸುರಿದು ನೆರೆ ಬಂದ ದಿನವನ್ನು ಮತ್ತೆ ನೆನಪಿಸುವಂತಿದೆ.ಬುಧವಾರ ಸುರಿದ ಮಳೆಗೆ ಭದ್ರಾ ನದಿಯು ತುಂಬಿ ಹರಿಯಿತು ಪರಿಣಾಮ ಕಳಸ-ಹೊರನಾಡು ಮದ್ಯೆ ಭದ್ರಾ ನದಿಗೆ ಕಟ್ಟಿರುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತವಾಯಿತು.ಸಂಜೆಯವರೆಗೂ ಸೇತುವೆ ದಾಟಲಾಗದೆ ಪ್ರವಾಸಿಗರು,ಗ್ರಾಮಸ್ಥರು ತೊಂದರೆ ಅನುಭವಿಸಿದರು.ಕೆಲ ಪ್ರಯಾಣಿಕರು ಹಳುವಳ್ಳಿಯಿಂದ ಇನ್ನುವ ಬದಲಿ ಮಾರ್ಗದಲ್ಲಿ ಪ್ರಯಾಣ ಬೆಳೆಸಿದರು.ಕಳೆದ ಇಪ್ಪತೈದು ದಿನಗಳ ಅವದಿಯಲ್ಲಿ ಐದು ಬಾರಿ ಈ ಸೇತುವೆ ಮುಳುಗಡೆಯಾಗಿ ದಾಖಲೆ ಬರೆಯಿತು.ಮಳೆಯಂದಾಗಿ ಕಳಸ ಹೊರನಾಡಿಗೆ ಬಂದಿರುವ ನೂರಾರು ಪ್ರವಾಸಿಗರು ಇಲ್ಲಿಯ ಮಳೆಯ ಅಬ್ಬರದಿಂದ ಕಂಗೆಟ್ಟು ಹೋಗಿದ್ದಾರೆ.
ನದಿಯ ಆಸು ಪಾಸಿನ ಅಡಕೆ ತೋಟಗಳು,ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ.ಬಹುತೇಕ ನದಿಯ ಅಂಚಿನ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ಅಡಕೆ ಗಿಡಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಸುರಿಯುತ್ತಿರುವ ಮಳೆಯಿಂದ ನಾಗರೀಕರು ಮನೆ ಬಿಟ್ಟು ಹೊರ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.ಪಟ್ಟಣದಲ್ಲಿ ಜನ ಇಲ್ಲದೆ ಬಿಕೋ ಅನ್ನುತ್ತಿದೆ.ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ನಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.