ಚಿಕ್ಕಮಗಳೂರು: ಕುಂಭದ್ರೋಣ ಹಾಗೂ ಪುನರ್ವಸು ಮಳೆಯ ಬಳಿಕ ಮಲೆನಾಡು ಭಾಗದಲ್ಲಿ ಆಶ್ಲೇಷ ಮಳೆಯ ಅಬ್ಬರ ಜೋರಾಗಿದೆ. ಕಳೆದ ಒಂದೂವರೆ ತಿಂಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಮಲೆನಾಡಿಗರ ಜನಜೀವನ ಅಕ್ಷರಶಃ ನೀರುಪಾಲಾಗಿತ್ತು. ಇದೀಗ ಮತ್ತೆ ನಿನ್ನೆ ಸಂಜೆಯಿಂದ ಮಳೆ ಮತ್ತೆ ಆರ್ಭಟಿಸುತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸುರಿಯುತ್ತಿರೋ ಮಳೆಯಿಂದ ಅಡಿಕೆ, ಕಾಫಿ, ಮೆಣಸು ಸಂಪೂರ್ಣ ನೆಲಕ್ಕುದುರುತ್ತಿದ್ರೆ, ಭತ್ತದ ಗದ್ದೆಗಳು ಜಲಾವೃತವಾಗಿದೆ. ಕುದುರೆಮುಖ, ಕಳಸ ಭಾಗದಲ್ಲಿ ಸುರಿಯುತ್ತಿರೋ ಮಳೆಯಿಂದ ಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ರೆ, ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಮತ್ತೊಮ್ಮೆ ಮುಳುಗಿದ್ದು, ಒಂದೇ ತಿಂಗಳ ಅವಧಿಯಲ್ಲಿ ದಾಖಲೆಯ 10ನೇ ಬಾರಿ ಮುಳುಗಿದೆ. ಇನ್ನು ಕೆರೆಕಟ್ಟೆ, ಕಿಗ್ಗಾ ಹಾಗೂ ಶೃಂಗೇರಿಯ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ತುಂಗಾ ನದಿ ಕೂಡ ಮೈದುಂಬಿ ಹರಿಯುತ್ತಿದೆ. ಮಲೆನಾಡಿನ ಮಳೆಗೆ ತುಂಗಾ ಹಾಗೂ ಭದ್ರ ನದಿಯ ತಟದ ಜನರಿಗೆ ನೆರೆಹಾವಳಿಯ ಭೀತಿ ಎದುರಾಗಿದೆ. ಇತ್ತ ಬಾಳೆಹೊನ್ನೂರಿನಲ್ಲೂ ಸುರಿಯುತ್ತಿರೋ ಮಹಾ ಮಳೆಗೆ ಬಾಳೆಹೊನ್ನೂರು ಸಂತೇ ಮೈದಾನ ಕೂಡ ಜಲಾವೃತಗೊಂಡಿದೆ. ನಿರಂತರವಾಗಿ ಸುರಿಯತ್ತಿರೋ ಮಳೆಯಿಂಜ ಜನರ ಕೆಲಸ ಕಾರ್ಯಗಳಿಗೂ ಸಾಕಷ್ಟು ತೊಂದರೆಯಾಗಿದ್ದು, ಮಳೆ ನಿಂತರೇ ಸಾಕಾಪ್ಪ ಎಂದು ವರುಣ ದೇವನಲ್ಲಿ ಮೊರೆ ಇಟ್ಟಿದ್ದಾರೆ.