ಚಿಕ್ಕಮಗಳೂರು-ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಮಹಾಮಳೆಗೆ ಮಲೆನಾಡಿಗರು ತತ್ತರಿಸಿದ್ರೆ, ಇತ್ತ ಬಿರುಗಾಳಿ ಸಹಿತ ಸುರಿಯುತ್ತಿರೋ ಮಳೆಗೆ ಬೃಹತ್ ಮರಗಳು, ರಸ್ತೆ ಬದಿಯ ಗುಡ್ಡಗಳು ಧರೆಗುರುಳಿದ್ದು ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ರ ಹಾಂದಿ ಬಳಿ ಬೃಹತ್ ಮರವೊಂದು ರಸ್ತೆ ಬಿದ್ದ ಪರಿಣಾಮ ಎರಡು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿದೆ.
ಇನ್ನು ಮುಳ್ಳಯ್ಯನಗಿರಿ ಭಾಗದಲ್ಲಿ ಭಾರೀ ಮಳೆಯಾಗ್ತಿದ್ದು ಗುಡ್ಡ ರಸ್ತೆ ಬಿದ್ದ ಪರಿಣಾಮ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾನುವಾರವಾದ್ರಿಂದ ಸಾವಿರಾರು ಪ್ರವಾಸಿಗರು ಗಿರಿಭಾಗ ಮತ್ತು ದತ್ತಪೀಠಕ್ಕೆ ಬಂದಿದ್ರು. ಮಾರ್ಗ ಮಧ್ಯೆ ಗುಡ್ಡ ಕುಸಿದಿರೋದ್ರಿಂದ ಮಳೆಗಾಳಿಗೆ ಕಂಗಾಲಾಗಿದ್ದಾರೆ. ಕುದುರೆಮುಖ, ಕಳಸದಲ್ಲಿ ಭಾರೀ ಮಳೆಯಾಗ್ತಿದ್ದು ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ. ಕಳೆದ 40 ದಿನದಲ್ಲಿ 12 ಬಾರಿ ಮುಳುಗಿರೋ ಈ ಸೇತುವೆ, ಇದೀಗ 13ನೇ ಬಾರಿ ಮುಳುಗುವ ಸಾಧ್ಯತೆ ಇದೆ. ಭದ್ರೆಯ ಒಡಲಿಗೆ ಅಪಾರ ಪ್ರಮಾಣದ ನೀರು ಹರಿದು ಬರ್ತಿದ್ದು ಜನ ಕಂಗಾಲಾಗಿದ್ದಾರೆ.ಕೊಪ್ಪ ತಾಲೂಕಿನ ಹೇರೂರು ಬಳಿಯೂ ಗುಡ್ಡ ಕುಸಿದಿದ್ದು ಹೇರೂರು-ಬಸರಿಕಟ್ಟೆ ಮಾರ್ಗ ಕೂಡ ಬಂದ್ ಆಗಿದ್ದು, ಸುರಿಯುತ್ತಿರೋ ಮಳೆ ಕಾರ್ಯಚರಣೆಗೂ ಅಡ್ಡಿಯುಂಟು ಮಾಡ್ತಿದೆ.