ಬಡವರ ಪ್ರಾಣಕ್ಕೆ ಈ ರಾಜಕಾರಣಿಗಳು ನಯಾ ಪೈಸೆಯ ಬೆಲೆ ಕೊಡಲ್ಲ, ಕಗ್ಗನಳ್ಳ ಗ್ರಾಮಸ್ಥರ ಆಕ್ರೋಶ…

308
firstsuddi

ಅಂದು ನೂರಾರು ಮಕ್ಕಳನ್ನು ಉಕ್ಕುಡದ ಮುಖಾಂತರ ದಡ ಸೇರಿಸಿ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲಕರವಾದ ವಾತಾವರಣವಿತ್ತು..ಆದರೆ ಇಂದು ಉಕ್ಕುಡದ ನಡೆಸುತ್ತಿದ್ದ ನಿರ್ವಾಕನಿಕ ಇಲ್ಲದೆ ನೂರಾರು ಜನ ನದಿ ದಾಟಲಾಗದೆ ತೊಂದರೆ ಅನುಭವಿಸುತ್ತಿರುವುದು ಕಗ್ಗನಾಳ್ಳದಲ್ಲಿ ಕಂಡು ಬರುತ್ತಿದೆ.
ಇಲ್ಲಿಗೆ ಸಮೀಪದ ಭದ್ರಾ ನದಿಯ ತಟದಲ್ಲಿರುವ ಕಗ್ಗನಳ್ಳ ಗ್ರಾಮದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನತೆಗೆ ಸುಸಜ್ಜಿತ ಸೇತುವೆಯ ಬೇಡಿಕೆ ಎರಡು ದಶಕಗಳಿಂದ ಕೇಳಿ ಬರುತ್ತಿದೆ.ಆದರೆ ಅದು ಇಲ್ಲಿಯ ಗ್ರಾಮಸ್ಥರಿಗೆ ಕೈಗೂಡಲಿಲ್ಲ.ಪರ್ಯಾಯ ವ್ಯವಸ್ಥೆ ಎಂಬಂತೆ ಇಲ್ಲಿ ಅನಾದಿಕಾಲದಿಂದ ತೆಪ್ಪದ ಮೂಲಕ ಜೀವಭಯದಿಂದ ಸುಧಾಕರ ಎಂಬುವವರು ನದಿಯನ್ನು ದಾಟಿಸುತ್ತಿದ್ದರು.
ಆದರೆ 2ಂ17ರ ಅಕ್ಟೋಬರ್ ತಿಂಗಳಿನಲ್ಲಿ ಉಕ್ಕುಡ ನಡೆಸುತ್ತಿದ್ದ ಸುದಾಕರ್ ಉಕ್ಕುಡ ಮಗುಚಿ ಬಿದ್ದು ನೀರು ಪಾಲಾಗಿದ್ದರು.ಇದರಿಂದ ಇಲ್ಲಿಯ ಗ್ರಾಮಸ್ಥರು ನದಿಯನ್ನು ದಾಟಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಕಳಸ ಪಟ್ಟಣದಿಂದ ಕೇವಲ 15 ಕಿಮೀ ದೂರದಲ್ಲಿರುವ ಕಗ್ಗನಳ್ಳ ಗ್ರಾಮ ತೋಟದೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿದೆ.ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಭದ್ರಾನದಿ ತುಂಬಿ ಹರಿಯುತ್ತಿದ್ದು ಈ ನದಿಯಾಚೆಗಿನ ಕೆಲವು ಗ್ರಾಮಗಳ ಜನರು ನಾಗರೀಕ ಸೌಲಭ್ಯಗಳಿಗಾಗಿ ಸಮೀಪದ ಕಗ್ಗನಳ್ಳ, ಬಾಳೆಹೊಳೆ, ಕಳಸ, ಬಾಳೆಹೊನ್ನೂರು ಪಟ್ಟಣವನ್ನು ಅವಲಂಬಿಸಿದ್ದಾರೆ.
ಬಿಳಗೂರು, ಹಾರ್ನಾಡು, ಕೆಳಬಾಗ, ಹೊಳಲು, ಕಗ್ಗನಳ್ಳ ಎಸ್ಟೇಟ್ ಮೊದಲಾದ ನಕ್ಸಲ್ ಪೀಡಿತ ಗ್ರಾಮಗಳು ಕಗ್ಗನಳ್ಳ ಗ್ರಾಮದ ಮೂಲಕವೇ ಬಾಳೆಹೊಳೆ, ಕಳಸ, ಬಾಳೆಹೊನ್ನೂರು, ಮೂಡಿಗೆರೆ, ಚಿಕ್ಕಮಗಳೂರಿನ ಸಂಪರ್ಕ ಕಲ್ಪಿಸಕೊಳ್ಳಬೇಕು. ಆದರೆ ಕಗ್ಗನಳ್ಳ ಗ್ರಾಮದಲ್ಲಿ ಭದ್ರಾನದಿ ತುಂಬಿ ಹರಿಯುತ್ತಿರುವುದರುವುದರಿಂದ ಈ ನದಿಗೆ ಸೇತುವೆಯ ಸಂಪರ್ಕ ಇಲ್ಲದೆ ಇರುವುದರಿಂದ ಗ್ರಾಮಸ್ಥರು ಸುತ್ತಿ ಬಳಸಿ ಬಾಳೆಹೊಳೆ ಸೇತುವೆಯ ಮುಖಾಂತರ ಬರಬೇಕಾದ ಅನಿವಾರ್ಯವಾಗಿದೆ.
ಈ ಗ್ರಾಮಗಳ ಒಟ್ಟ ಜನಸಂಖ್ಯೆ 1 ಸಾವಿರಕ್ಕೂ ಹೆಚ್ಚಿದೆ. ವ್ಯಾಪಾರ-ವಹಿವಾಟು,ಶಿಕ್ಷಣ, ಆರೋಗ್ಯ, ಕಂದಾಯ, ಪೊಲೀಸ್, ಉದ್ಯೋಗ, ದಿನಸಿ ವಸ್ತುಗಳು ಮೊದಲಾದ ನಾಗರೀಕ ಸೌಲಭ್ಯಗಳಿಗಾಗಿ ಗ್ರಾಮಸ್ಥರು ಕಳಸ, ಬಾಳೆಹೊಳೆಯಂತಹ ಊರುಗಳನ್ನು ಅವಲಂಬಸಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ನದಿಯಲ್ಲಿ ನೀರು ಕಡಿಮೆಯಾದಾಗ ನದಿಗೆ ಮರದ ದಿಮ್ಮಿಗಳನ್ನು ಜೋಡಿಸಿ ಅದರ ಮುಖಾಂತರ ನದಿಯನ್ನು ದಾಟುತ್ತಾರೆ ಆದರೆ ಮಳೆಗಾಲದಲ್ಲಿ ಇವರ ಸ್ಥಿತಿ ಚಿಂತಾಜನಕವಾಗಿದೆ.
ಪ್ರತಿನಿತ್ಯ ನೂರಾರು ಶಾಲಾ ಮಕ್ಕಳು, ಉದ್ಯೋಗಿಗಳು, ಕೂಲಿಕಾರ್ಮಿಕರು, ಅನಾರೋಗ್ಯ ಪೀಡಿತರು ಕಳಸ ಇನ್ನಿತರೆ ಪ್ರದೇಶಗಳಿಗೆ ಹೋಗಬೇಕಾಗಿದೆ ಆದರೆ ಇತ್ತ ಉಕ್ಕುಡವೂ ಇಲ್ಲದೆ ಇತ್ತ ತಮ್ಮ ಬೇಡಿಕೆಯನ್ನು ಈಡೇರಿಸದೆ ಗ್ರಾಮಸ್ಥರು ಅತಂತ್ರರಾಗಿದ್ದಾರೆ.
ಸುದಾಕರ್ ಇರುವಾಗ ಹೇಗೂ ತನ್ನು ಜೀವವನ್ನು ಪಣಕ್ಕಿಟ್ಟು ನಮ್ಮನ್ನು ಉಕ್ಕುಡದ ಮುಖಾತರ ದಡ ಸೇರಿಸುತ್ತಿದ್ದರು.ಆದರೆ ಈಗ ಅವರಿಲ್ಲದೆ ನಾವು ಸಾಕಷ್ಟು ದೂರ ನಡೆದುಕೊಂಡು ಬಂದು ಬಾಳೆಹೊಳೆಯ ಸೇತುವೆಯ ಮುಖಾಂತರ ಶಾಲೆ ಹೋಗಬೇಕಾಗಿದೆ ಎಂದು ಈ ಬಾಗದ ಶಾಲಾ ವಿದ್ಯಾರ್ಥಿಗಳು ಹೇಳುತ್ತಾರೆ.
“ನಾವು ಕಳೆದ ಮೂವತ್ತು ವರ್ಷಗಳಿಂದ ಕಗ್ಗನಳ್ಳ ಗ್ರಾಮದಲ್ಲಿ ತೂಗು ಸೇತುವೆ ನಿರ್ಮಿಸಿ ಕೊಡಿ ಎಂದು ಸರ್ಕಾರಕ್ಕೆ, ಶಾಸಕರಿಗೆ ಅರ್ಜಿ ಕೊಡುತ್ತಲೇ ಬಂದಿದ್ದೀವಿ. ಆದ್ರೆ, ಐದು ವರ್ಷಗಳಿಗೊಮ್ಮೆ ಓಟು ಕೇಳಲು ಬರುವ ಜನಪ್ರತಿನಿಧಿಗಳು, ಯಾವತ್ತೂ ನಮ್ಮ ಗೋಳು ಕೇಳಲು ಬಂದಿಲ್ಲ. ಶ್ರೀಮಂತರು ವಾಸವಿರುವ ಕಡೆ ಎಲ್ಲದಂರಲ್ಲಿ ತೂಗುಸೇತುವೆ ನಿರ್ಮಿಸಿದ್ದಾರೆ, ಆದರೆ ಬಡವರ ಪ್ರಾಣಕ್ಕೆ ಈ ರಾಜಕಾರಣಿಗಳು ನಯಾ ಪೈಸೆಯ ಬೆಲೆ ಕೊಡಲ್ಲ ಎಂದು ಆಕ್ರೋಶದಿಂದ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾರೆ ಈ ಬಾಗದ ಗ್ರಾಮಸ್ಥರು.
ಹೇಳಿಕೇಳಿ ಕಳಸ ಹೋಬಳಿ ನಕ್ಸಲ್ ಪೀಡಿತ ಪ್ರದೇಶ. ಕಗ್ಗನಳ್ಳ ಕೂಡ ನಕ್ಸಲ್ ಪೀಡಿತ ಗ್ರಾಮಗಳಲ್ಲೊಂದು. ನಕಲ್ಸ್ ಪೀಡಿತ ಗ್ರಾಮಗಳ ಅಭಿವೃದ್ಧಿಗೆಂದೇ ಸರ್ಕಾರ ಕೋಟಿಗಟ್ಟಲೆ ನಕ್ಸಲ್ ಪ್ಯಾಕೇಜ್‍ನಡಿಯಲ್ಲಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಈ ಹಣವೆಲ್ಲ ಎಲ್ಲಿ ಹೋಗುತ್ತಿದೆಯೋ ಗೊತ್ತಿಲ್ಲ. ನಕ್ಸಲ್ ಪೀಡಿತ ಗ್ರಾಮವಾದ ಕಗ್ಗನಳ್ಳದಲ್ಲಿ ಒಂದು ತೂಗು ಸೇತುವೆ ಅಗತ್ಯ ವಿದೆ.ಇದರಿಂದ ಪ್ರತೀ ನಿತ್ಯ ನೂರಾರು ಜನರಿಗೆ ಉಪಯೋಗವೂ ಇದೆ.ನೂತನವಾಗಿ ಆಯ್ಕೆಯಾದ ಶಾಸಕ ಎಂ.ಪಿ.ಕುಮಾರಸ್ವಾಮಿ ಈ ಬಾಗಕ್ಕೆ ಸೇತುವೆಯ ಬಾಗ್ಯವನ್ನು ನೀಡುತ್ತಾರೆ ಎನ್ನುವ ಅಪೇಕ್ಷೆಯೊಂದಿಗೆ ಈ ಬಾಗದ ಗ್ರಾಮಸ್ಥರಿದ್ದಾರೆ.
(ಸುದೀಶ್ ಸುವರ್ಣ ಕಳಸ)