ಚಿಕ್ಕಮಗಳೂರು – ಯುವಜನತೆ ರಕ್ತದಾನವನ್ನು ತಮ್ಮ ಹೊಣೆಗಾರಿಕೆಯೆಂದು ಭಾವಿಸಬೇಕು, ತುರ್ತು ಸಂದರ್ಭಗಳಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಪ್ರಾಣದಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಕರೆ ನೀಡಿದರು.ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಸಂಸ್ಥೆ ನಗರ ಹೊರವಲಯದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ರಕ್ತದಾನ ಜಾಗೃತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು ರಕ್ತದಾನ, ರಕ್ತದಾನ ಮಾಡಿದರೆ ಪ್ರಾಣದಾನ ಮಾಡಿದಂತಾಗುತ್ತದೆ, ರಕ್ತದಾನ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದ ಅವರು ಯುವಜನತೆ ಇದನ್ನು ಅರಿತು ತುರ್ತು ಸಂದರ್ಭಗಳಲ್ಲಿ ರೋಗಿಗಳ ನೆರವಿಗೆ ದಾವಿಸಬೇಕು ಎಂದು ಕಿವಿಮಾತು ಹೇಳಿದರು.ರಕ್ತದಾನ ಮಾಡಿದರೆ ನಮ್ಮ ದೇಹದಲ್ಲಿ ರಕ್ತ ಕಡಿಮೆಯಾಗುತ್ತದೆ, ನಿಶ್ಯಕ್ತಿಯಾಗುತ್ತದೆ ಎಂದು ಯುವಜನತೆ ಯೋಚಿಸಬಾರದು, ರಕ್ತ ನೀಡುವುದರಿಂದ ದೇಹದಲ್ಲಿ ಇನ್ನಷ್ಟು ರಕ್ತ ಉತ್ಪಾದನೆಯಾಗುತ್ತದೆ, ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ಹೃದಯಾಘಾತದ ಸಂಭವ ತಪ್ಪುತ್ತದೆ, ದೇಹ ಇನ್ನಷ್ಟು ಉಲ್ಲಾಸಗೊಂಡು, ಆರೋಗ್ಯ ವೃದ್ದಿಸುತ್ತದೆ ಎಂದು ತಿಳಿಸಿದರು.
ರಕ್ತದಾನದ ಮಹತ್ವ ಕುರಿತು ಉಪನ್ಯಾಸ ನೀಡಿದ ಸಾರ್ವಜನಿಕ ಆಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ|| ಮುರಳೀಧರ್ ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ, ಅದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಯುವಜನತೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರೆ ಮಾತ್ರ ರೋಗಿಗಳ ಪ್ರಾಣ ಉಳಿಸಲು ವೈದ್ಯರಿಗೆ ಸಾಧ್ಯವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಸಂಸ್ಥೆಯ ಅಧ್ಯಕ್ಷ ಮೊಹಿದ್ದೀನ್ ಇಕ್ಬಾಲ್ ಯುವಜನತೆಗೆ ರಕ್ತದಾನದ ಮಹತ್ವವನ್ನು ತಿಳಿಸಿ ಅವರನ್ನು ರಕ್ತದಾನಕ್ಕೆ ಪ್ರೇರೇಪಿಸುವ ಉದ್ದೇೀಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಜೆಸಿಐ ಮಾಜಿ ಅಧ್ಯಕ್ಷ ಅನಿಲ್ ಆನಂದ್, ಪ್ರಧಾನ ಕಾರ್ಯದರ್ಶಿ ಗಿರಿಧರ್‍ರಾಜ್ ಅರಸ್, ನಿರ್ದೇಶಕ ಜೆ.ಸತ್ಯನಾರಾಯಣ, ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್.ಶಿವಕುಮಾರ್, ನಾಗೇಶ್ ಉಪಸ್ಥಿತರಿದ್ದರು.ಉಪನ್ಯಾಸಕರಾದ ವಿಜಯಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಎನ್.ಪ್ರಕಾಶ್ ಸ್ವಾಗತಿದರು, ಟಿ.ವಿ.ಪ್ರದೀಪ್ ವಂದಿಸಿದರು.
Home ಸ್ಥಳಿಯ ಸುದ್ದಿ ತುರ್ತು ಸಂದರ್ಭಗಳಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಪ್ರಾಣದಾನಕ್ಕೆ ಮುಂದಾಗಬೇಕು – ಸತ್ಯಭಾಮ...