ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ಚಿಕ್ಕಮಗಳೂರು, ಶೃಂಗೇರಿಗೆ : ರಾಗಾ ಪ್ರವಾಸದ ವೇಳಾಪಟ್ಟಿ ಇಲ್ಲಿದೆ

1074

ಬೆಂಗಳೂರು: ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ದೇವಾಲಯ ಭೇಟಿ ಫಲಪ್ರದವಾದ ಬೆನ್ನಲ್ಲೇ ಇದೇ ತಂತ್ರವನ್ನು ಕರ್ನಾಟಕದಲ್ಲಿ ಮುಂದುವರಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಕರ್ನಾಟಕದಲ್ಲೂ ಹಿಂದುತ್ವದ ಜಪ ಮಾಡಲು ಆರಂಭಿಸಿದೆ.ಹೌದು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇವಾಲಯ ಪ್ರವಾಸಕ್ಕೆ ಮುಹೂರ್ತ ನಿಗದಿಯಾಗಿದ್ದು, ಒಂದೇ ದಿನ ಎರಡು ಮಠಕ್ಕೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 10 ರಿಂದ ಮೂರು ದಿನ ರಾಹುಲ್ ಗಾಂಧಿ ಮೊದಲ ಪ್ರವಾಸ ಮಾಡಲಿದ್ದು, ಫೆಬ್ರವರಿ 20ರಿಂದ ರಾಹುಲ್ ಗಾಂಧಿಯ ಎರಡನೇ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡನೇ ಪ್ರವಾಸದ ವೇಳೆ ದೇವಾಲಯ ಭೇಟಿಯ ಪಟ್ಟಿಯನ್ನು ಕೆಪಿಸಿಸಿ ತಯಾರಿಸಿದ್ದು, ಶೃಂಗೇರಿಯ ಶಾರದಾ ಮಠ ಹಾಗೂ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.ರಾಹುಲ್ ಗಾಂಧಿಯ ಈ ಪ್ರವಾಸದ ವೇಳೆ ರಾಜ್ಯದ ಕೈ ನಾಯಕರು ಸಾಥ್ ನೀಡಲಿದ್ದು ಈ ಮೂಲಕ ಹಿಂದುತ್ವ ವಿಚಾರವನ್ನು ಪ್ರಸ್ತಾಪಿಸಿ ಜನರನ್ನು ಸೆಳೆಯಲು ಮುಂದಾಗುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಮುಂದಾಗಿದೆ.ವೇಳಾಪಟ್ಟಿ ಹೀಗಿದೆ:

ಮೊದಲ ದಿನ ಶಿವಮೊಗ್ಗದಿಂದ ಆರಂಭಿಸಿ  ಭದ್ರಾವತಿ, ತರೀಕೆರೆ, ಕಡೂರು, ಸಖರಾಯಪಟ್ಟಣದ ಮೂಲಕ ಚಿಕ್ಕಮಗಳೂರಿಗೆ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಕಾಫಿ ತೋಟ ಮತ್ತು ಕಾಳುಮೆಣಸು ಬೆಳೆಗಾರರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಆ ದಿನ ಚಿಕ್ಕಮಗಳೂರಿನಲ್ಲಿ ತಂಗಲಿದ್ದಾರೆ.ಎರಡನೇ ದಿನ ಬೆಳಗ್ಗೆ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಂಗಳೂರಿನಿಂದ ಕುಂದಾಪುರಕ್ಕೆ ರೋಡ್ ಶೋ ನಡೆಸಲಿದ್ದಾರೆ. ಮಂಗಳೂರು, ಸುರತ್ಕಲ್, ಮೂಲ್ಕಿ, ಕಾಪು, ಉಡುಪಿ, ಬ್ರಹ್ಮವಾರ, ಕೋಟಾ, ಕುಂದಾಪುರಕ್ಕೆ ರೋಡ್ ಶೋ ಮಾಡಲಿದ್ದಾರೆ. ಸಂಜೆ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಅಂದು ಉಡುಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮೂರನೇ ದಿನ ಅರಸೀಕೆರೆ, ತಿಪಟೂರು, ಕೆ.ಬಿ. ಕ್ರಾಸ್, ಗುಬ್ಬಿ, ಮಾರ್ಗವಾಗಿ ತುಮಕೂರುವರೆಗೆ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ.