ಅಂಬಳೆಯ ಇತಿಹಾಸ ಪ್ರಸಿದ್ದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀ ಕೃಷ್ಣನ ಜನ್ಮಾಷ್ಟಮಿ ಆಚರಣೆ…

405
firstsuddi

ಚಿಕ್ಕಮಗಳೂರು -ತಾಲ್ಲೂಕಿನ ಅಂಬಳೆಯ ಇತಿಹಾಸ ಪ್ರಸಿದ್ದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಗ್ರಾಮದ ವಿಪ್ರ ಸಮುದಾಯದವರು ತಮ್ಮ ಕುಲದೈವ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಭಾನುವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು.ಜನ್ಮಾಷ್ಟಮಿ ಪ್ರಯುಕ್ತ ರುಕ್ಮಿಣಿ ಸತ್ಯಭಾಮ ಸಹಿತನಾದ ಶ್ರೀ ವೇಣುಗೋಪಾಲಸ್ವಾಮಿಯ ಆಳೆತ್ತರದ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಜಲಾಭಿಷೇಕ, ವಿಷ್ಣುಸಹಸ್ರನಾಮ ಪಾರಾಯಣ, ತುಳಸಿ ಅರ್ಚನೆ, ವಿಶೇಷ ಅಲಂಕಾರ ನಡೆಯಿತು.
ಗರ್ಭಗುಡಿಯಲ್ಲಿ ಅಭಿಷೇಕ ಮತ್ತು ಪೂಜಾದಿಗಳು ಆರಂಭಗೊಳ್ಳುತ್ತಿದ್ದಂತೆ ಮುಂಭಾಗದಲ್ಲಿ ಭಕ್ತರು ಸಾಮೂಹಿಕ ಭಜನೆ, ನಾಮ ಸಂಕೀರ್ತನೆ, ಸ್ತ್ರೋತ್ರ ಪಠಣ, ಸಂಗೀತ ಸೇವೆ ಸಲ್ಲಿಸಿದರು, ವಿಪ್ರ ಯುವಬಳಗದಿಂದ ವೇದ, ಮಂತ್ರ ಪಠಣ ಜರುಗಿತು. ರಾತ್ರಿ ಮಹಾಮಂಗಳಾರತಿ ನಂತರ ಬಾಲಕೃಷ್ಣನಿಗೆ ಹಸುವಿನ ಹಾಲಿನಿಂದ ಅಘ್ರ್ಯ ನೀಡಲಾಯಿತು, ಅಷ್ಟಾವಧಾನ ಸೇವೆ ಸಲ್ಲಿಸಲಾಯಿತು, ದೇವಾಲಯದ ಪ್ರಾಂಗಣದಲ್ಲಿ ವಿಶೇಷ ತೊಟ್ಟಿಲಿನಲ್ಲಿ ಪ್ರತಿಷ್ಠಾಪಿಸಿದ್ದ ಕೃಷ್ಣನ ಉತ್ಸವ ಮೂರ್ತಿಗೆ ಮಹಿಳೆಯರು ಆರತಿ ಎತ್ತಿ ಪೂಜೆ ಸಲ್ಲಿಸಿದರು.ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು, ಇದೇ ವೇಳೆ ಬೇಲೂರಿನ ವಿದ್ವಾನ್ ಬಿ.ಎಂ.ಶ್ರೀನಿವಾಸ್ ತಂಡದಿಂದ ನಡೆದ ಸ್ಯಾಕ್ಸೋಪೋನ್ ವಾದನ ಸಾರ್ವಜನಿಕರ ಗಮನ ಸೆಳೆಯಿತು, ತಿಪಟೂರು, ಚೆನ್ನರಾಯಪಟ್ಟಣ, ಬೆಂಗಳೂರು, ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.