ನವದೆಹಲಿ: ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಮೀನಾಮೇಷ ಎಣಿಸುತ್ತಿವೆ ಎಂದು ಆರೋಪಿಸಿರುವ 50 ಸದಸ್ಯರು ಜಲಸಂಪನ್ಮೂಲ ಸಚಿವಾಲಯ ಮತ್ತು ಪ್ರಧಾನಮಂತ್ರಿ ಗಮನ ಸೆಳೆಯಲು ಜನ ಸಾಮಾನ್ಯರ ವೇದಿಕೆ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದಾರೆ. ಉತ್ತರ ಕರ್ನಾಟಕದ ಜನತೆಗೆ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆಗಳಾದ ಕಳಸಾ ಬಂಡೂರಿ ಮತ್ತು ಮಹದಾಯಿ ಅನುಷ್ಠಾನಕ್ಕಾಗಿ ಆಗ್ರಹಿಸಿ ಕಳಸಾ ಬಂಡೂರಿ ಮಲಪ್ರಭಾ ಜೋಡಣೆ ಹೋರಾಟ ಕೇಂದ್ರ ಸಮಿತಿ ಸದಸ್ಯರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಈ ಮಹತ್ವದ ಯೋಜನೆಗಳನ್ನು ಕಾರ್ಯಗತಗೊಳಿಸಲು ಕಳೆದ ಮೂರು ದಶಕಗಳಿಂದ ಯಾವುದೇ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪಕ್ಷದ ಹಿತಾಸಕ್ತಿಯೇ ಮುಖ್ಯ ಎಂಬುದನ್ನು ರಾಜಕೀಯ ಪಕ್ಷಗಳು ಈ ಅವಧಿಯಲ್ಲಿ ಸಾಬೀತು ಮಾಡಿವೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ರಾಜಕೀಯ ಪಕ್ಷಗಳ ನಾಯಕರು ತಮ್ಮ ಸ್ವಾರ್ಥ ಮತ್ತು ಸ್ವಹಿತಾಸಕ್ತಿಗಾಗಿ ಈ ಹೋರಾಟದ ತೀವ್ರತೆಯನ್ನು ತಗ್ಗಿಸಿದ್ದಾರೆ.
ಉತ್ತರ ಕರ್ನಾಟಕದ ಜನರು ಕುಡಿಯುವ ಹನಿ ನೀರಿಗಾಗಿ ಪರದಾಟುತ್ತಿದ್ದರೂ ಈ ಮುಖಂಡರಿಗೆ ಜನಹಿತಕ್ಕಿಂತ ಪಕ್ಷಗಳ ಹಿತಾಸಕ್ತಿಯೇ ಮುಖ್ಯವಾಗಿದೆ. ರಾಜಕೀಯ ಪಕ್ಷಗಳು ದ್ವಂದ್ವ ನೀತಿ ಅನುಸರಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಂದ ತಲಾ ಒಬ್ಬರಂತೆ ಒಟ್ಟು 50 ಸದಸ್ಯರು ದೆಹಲಿಗೆ ತೆರಳಿದ್ದು, ರಾಜಧಾನಿಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವರು.