ಕಳಸ:ಹೊಬಳಿಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದು,ಸೋಮವಾರ ಭದ್ರಾ ನದಿಯು ಗರಿಷ್ಠ ಪ್ರಮಾಣದಲ್ಲಿ ತುಂಬಿ ಹರಿಯಲಾರಂಬಿಸಿತು.
ಕುದುರೆಮುಖ,ಜಾಂಬ್ಲೆ,ನೆಲ್ಲಿಬೀಡು ಪ್ರದೇಶಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು,ನದಿ,ಹಳ್ಳ,ತೊರೆಗಳು ಮೈದುಂಬಿ ಹರಿಯಲಾರಂಬಿಸಿದೆ.ಭದ್ರಾ ನದಿಯು ತುಂಬಿ ಹರಿಯುತ್ತಿರುವ ಪರಿಣಾಮ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತು.ಇದರಿಂದ ಹೊರನಾಡು,ಬಲಿಗೆ,ಚಿಕ್ಕನಕುಡಿಗೆ,ಮಾವಿನಹೊಲ,ಮಣ್ಣಿನಪಾಲ್ ಕಡೆ ಹೋಗುವ ಗ್ರಾಮಸ್ಥರು ತೊಂದರೆ ಅನುಭವಿಸಿದರು.ಹೊರನಾಡಿಗೆ ಬಂದ ಪ್ರವಾಸಿಗರು ಒಂದೆರಡು ಗಂಟೆ ಸೇತುವೆ ಬುಡದಲ್ಲಿ ಕಾಯುವಂತಾಯಿತು.ಕೆಲ ಪ್ರಯಾಣಿಕರು ಹೊರನಾಡಿಗೆ ಹೋಗುವ ಹಳುವಳ್ಳಿ ಬದಲಿ ಮಾರ್ಗದಲ್ಲಿ ತೆರಳಿದರು.
ಸಂಸೆಯ ಸೋಮಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯಲಾರಂಬಿಸಿತು.ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡವು.ಸಂಸೆ ಮುಖ್ಯ ರಸ್ತೆಯಲ್ಲಿ ಸಮರ್ಪಕ ಚರಂಡಿಯ ವ್ಯವಸ್ಥೆ ಇಲ್ಲದೆ ಮೂರು ಮನೆಗಳಿಗೆ ನೀರು ನುಗ್ಗಿತು.ಮುಖ್ಯ ರಸ್ತೆಯಲ್ಲಿ ಒಂದೆರಡು ಅಡಿಗಳಷ್ಟು ನೀರು ತುಂಬಿ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಹುಚ್ಚು ಸಾಹಸ ಮೆರೆದ ಪ್ರಯಾಣಿಕರು.
ಕಳಸ-ಹೊರನಾಡು ಸಂಪರ್ಕ ಹೆಬ್ಬಾಳೆ ಸೇತುವೆ ಮುಳುಗಡೆಯಾಗುತ್ತಿದ್ದಂತೆ ಪ್ರವಾಸಿಗರು,ಖಾಸಾಗಿ ಬಸ್ಸು,ಸರ್ಕಾರಿ ಬಸ್ಸು,ಇತರೆ ವಾಹನಗಳು ಸೇತುವೆ ದಾಟಿಸಿ ಹುಚ್ಚು ಸಹಾಸ ಮೆರೆದರು.
ಸೇತುವೆಯಿಂದ ಸುಮಾರು ಒಂದೂವರೆ ಅಡಿಗಳಷ್ಟು ಎತ್ತರದಲ್ಲಿ ರಬಸವಾಗಿ ನೀರು ಹರಿಯುತ್ತಿದ್ದರೂ ಕೂಡ ತುಂಬಿದ ಪ್ರಯಾಣಿಕರೊಂದಿಗೆ ಸೇತುವೆಯ ಮೇಲೆ ದಾಟಿಸಿದರು.ಸ್ಥಳಿಯರು ಇಂತ ಅಪಾಯಕಾರಿ ಸೇತುವೆಯ ಮೇಲೆ ವಾಹನ ದಾಟಿಸಬೇಡಿ ಎಂದು ಹೇಳಿದರೂ ಕೂಡ ಪ್ರವಾಸಿಗರು ಸ್ಥಳಿಯರ ಮಾತಿಗೆ ಬೆಲೆ ನೀಡಲಿಲ್ಲ.