ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಕಸರತ್ತು ನಡೆಸುತ್ತಿರೋ ಬೆನ್ನಲ್ಲೆ ಕೇಂದ್ರ ಸರ್ಕಾರ ವಿಧಾನ ಸಭೆ ಚುನಾವಣೆಯನ್ನು ವಿಳಂಬ ಮಾಡಲು ಸದ್ದಿಲ್ಲದೆ ಪ್ರಯತ್ನ ನಡೆಸಿದೆ. ನಂಬಲು ಅಚ್ಚರಿಯಾದರೂ ಇದು ಸತ್ಯ. ಕೇಂದ್ರ ಚುನಾವಣಾ ಆಯೋಗಕ್ಕೆ ಕೇಂದ್ರದಿಂದ ಇಂಥದೊಂದು ಮೌಖಿಕ ಆದೇಶ ಬಂದಿದೆ ಎಂಬ ಮಾತು ಹಬ್ಬಿದೆಯಾದರೂ ಈವರೆಗೂ ಇದು ದೃಢಪಟ್ಟಿಲ್ಲ. ಆದರೆ ಕೇಂದ್ರ ಸರ್ಕಾರ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಆರು ತಿಂಗಳ ಕಾಲ ಮುಂದೂಡಲು ಒತ್ತಡ ಹೇರಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಸೂಚನೆಗೆ ಕೇಂದ್ರ ಮುಖ್ಯ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಆರು ತಿಂಗಳ ಕಾಲ ವಿಳಂಬ ಮಾಡಿ ಡಿಸೆಂಬರ್ನಲ್ಲಿ ನಡೆಸಲು ಕೇಂದ್ರ ಸರ್ಕಾರ ಚಿಂತಿಸಿದೆ ಎಂದು ಗೊತ್ತಾಗಿದೆ. ಡಿಸೆಂಬರ್ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಘಡ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲೇ ಕೇಂದ್ರದ ಎನ್ಡಿಎ ಸರ್ಕಾರ ಅವಧಿಗೂ ಮುನ್ನವೇ ಲೋಕಸಭೆ ಚುನಾವಣೆಯನ್ನು ನಡೆಸಲು ತೀರ್ಮಾನಿಸಿದೆ. ಈ ವೇಳೆಯೇ ಕರ್ನಾಟಕದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಏಕಕಾಲದಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಕಳೆದ ಬುಧವಾರ ದೆಹಲಿಯಲ್ಲಿ ನಡೆದ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಒಂದೇ ದೇಶ ಒಂದೇ ಚುನಾವಣೆ( ಒನ್ ನೇಷನ್-ಒನ್ ಎಲೆಕ್ಷನ್) ಎಂಬ ಹೊಸ ಪರಿಕಲ್ಪನೆಯನ್ನು ಜಾರಿ ಮಾಡಬೇಕೆಂದು ಬಹುತೇಕ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯ ಮಾಡಿದ್ದಾರೆ. ಈಗಿರುವ ವ್ಯವಸ್ಥೆಯಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಪ್ರತ್ಯೇಕವಾಗಿ ನಡೆಸುವುದರಿಂದ ಅಭ್ಯರ್ಥಿಗಳ ಖರ್ಚುವೆಚ್ಚ ಹೆಚ್ಚಾಗುತ್ತದೆ. ಬದಲಿಗೆ ಒಂದೇ ಹಂತದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ನಡೆಸಿದರೆ ವೆಚ್ಚಕ್ಕೆ ಕಡಿವಾಣ ಹಾಕುವುದರ ಜೊತೆಗೆ ಆರ್ಥಿಕ ಹೊರೆಯನ್ನು ತಗ್ಗಿಸಬಹುದು ಎಂದು ಸಲಹೆ ನೀಡಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಉದ್ದೇಶದಿಂದಲೇ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು 6 ತಿಂಗಳ ಕಾಲ ವಿಳಂಬ ಮಾಡಲು ಮುಂದಾಗಿರುವುದು ತಿಳಿದುಬಂದಿದೆ. ಆದರೆ ಈಗಿರುವ ನಿಯಮದ ಪ್ರಕಾರ ಯಾವುದೇ ಒಂದು ರಾಜ್ಯದ ವಿಧಾನಸಭೆ ಚುನಾವಣೆಯನ್ನು ಇದ್ದಕ್ಕಿದ್ದಂತೆ ವಿಳಂಬ ಮಾಡುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಅವಧಿಗೂ ಮುನ್ನ ಚುನಾವಣೆಗೆ ಹೋಗಲು ಅವಕಾಶವಿದೆ ಹೊರತು, ಕಾರಣವಿಲ್ಲದೆ ವಿಳಂಬ ಮಾಡಲು ಆಸ್ಪದ ಇಲ್ಲ.
ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಯನ್ನು ವಿಳಂಬ ಮಾಡಬೇಕಾದರೆ ಸ್ಪಷ್ಟ ಕಾರಣವನ್ನು ನೀಡಬೇಕು. ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹಾಗೂ ಹಣಕಾಸಿನ ತುರ್ತು ಪರಿಸ್ಥಿತಿ ಉಂಟಾದಾಗ ಮಾತ್ರ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಮುಂದೂಡಲು ಕಾನೂನಿನಲ್ಲಿ ಅವಕಾಶವಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಡಿಸೆಂಬರ್ನಲ್ಲಿ ಚುನಾವಣೆ ನಡೆದರೆ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸೋಲುವ ಭೀತಿಯನ್ನು ಎದುರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಚುನಾವಣೆಗೆ ಹೋದರೆ ಗೆಲ್ಲಬಹುದೆಂಬ ಸಲಹೆಯನ್ನು ಆರ್ಎಸ್ಎಸ್ ನಾಯಕರು ನೀಡಿದ್ದಾರೆ. ಈ ಕಾರಣವನ್ನೇ ಮುಂದಿಟ್ಟುಕೊಂಡು ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಏಕರಾಷ್ಟ್ರ ಏಕ ಚುನಾವಣೆ ಕಲ್ಪನೆಯೊಂದಿಗೆ ಡಿಸೆಂಬರ್ನಲ್ಲಿ ಕರ್ನಾಟಕಕ್ಕೆ ಚುನಾವಣೆ ನಡೆಸಲು ಆಯೋಗಕ್ಕೆ ಕೇಂದ್ರ ಸರ್ಕಾರ ಸಲಹೆ ನೀಡಿದೆ ಎಂಬ ಮಾತು ಕೇಳಿಬಂದಿದೆ.
ಒಂದು ವೇಳೆ ಕೇಂದ್ರ ಸರ್ಕಾರದ ಚಿಂತನೆಯಂತೆ ಕರ್ನಾಟಕ ವಿಧಾನಸಭೆ ಚುನಾವಣೆ ಆರು ತಿಂಗಳ ಕಾಲ ವಿಳಂಬ ಮಾಡಿದರೆ ಮೇ 13ರ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿದೆ. ಈಗಿರುವ ಲೆಕ್ಕಾಚಾರದಂತೆ ಮೇ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಬೇಕು. ಮೇ 28ಕ್ಕೆ 14ನೇ ವಿಧಾನಸಭೆ ಅವಧಿ ಮುಗಿಯಲಿದೆ. ನಿಗದಿತ ಅವಧಿಯೊಳಗೆ ಚುನಾವಣೆ ನಡೆಯಲಿದೆಯೇ ಇಲ್ಲವೇ ವಿಳಂಬವಾಗಲಿದೆಯೇ ಎಂಬುದುನ್ನು ಕಾಲವೇ ತೀರ್ಮಾನಿಸಬೇಕು.