ಕರಾವಳಿ ಮಾದರಿಯಲ್ಲಿ ಮಲೆನಾಡಿನಲ್ಲೂ ಹತ್ಯೆ: ಬಿಜೆಪಿ ಮುಖಂಡನ ಹತ್ಯೆಗೆ ಕಾರಣವೇನು ?.

809
firstsuddi

ಚಿಕ್ಕಮಗಳೂರು- ಕಳೆದ ಮೂರು ವರ್ಷದಿಂದ ಚಿಕ್ಕಮಗಳೂರು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನಾಗಿದ್ದ ಮುಖಂಡನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಅಪರಿಚಿತ ವ್ಯಕ್ತಿಗಳು ಮೂರಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಹೊಟ್ಟೆಯಲ್ಲಿರೋ ಕರುಳು ಕಿತ್ತು ಬರುವಷ್ಟರ ಮಟ್ಟಿಗೆ ಕೊಲೆ ಮಾಡಿದ್ದು ಯಾವ ಕಾರಣಕ್ಕೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ?
ಚಿಕ್ಕಮಗಳೂರಿನ ಉಪ್ಪಳ್ಳಿ ನಿವಾಸಿಯಾಗಿರೋ 40 ವರ್ಷದ ಅನ್ವರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಪ್ತನೆಂದೇ ಗುರುತಿಸಿಕೊಂಡಿದ್ರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರೋ ಅನ್ವರ್ ಅಲ್ವಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿಯೂ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದು. ಅದ್ಯಾವುದೋ ಕಾರಣಕ್ಕೆ ತಡ ರಾತ್ರಿ 9.30 ರ ಸುಮಾರಿನಲ್ಲಿ ದುಷ್ಕರ್ಮಿಗಳು ಅನ್ವರ್ ನನ್ನ ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಗರದ ಗೌರಿಕಾಲುವೆ ಬಡಾವಣೆಯ ಗುಡ್ ಮಾರ್ನಿಂಗ್ ಶಾಪ್ ಹಿಂಭಾಗ ಅನ್ವರ್ ನ ಹೊಟ್ಟೆಗೆ ಐದು ಬಾರಿ ಚಾಕುವಿನಿಂದ ತಿವಿದು ಕೊಂದಿದ್ದಾರೆ. ಹೊಟ್ಟೆಯಲ್ಲಿರೋ ಕರುಳು ಕಿತ್ತು ಬರುವಂತೆ ಅನ್ವರ್ ನ ಹೊಟ್ಟೆ ಸೀಳಿದ್ದಾರೆ. ರಕ್ತದ ಮಡುವಿನಲ್ಲಿ ರಸ್ತೆ ಮಧ್ಯೆ ಬಿದ್ದು ಒದ್ದಾಡ್ತಿದ್ದ ಅನ್ವರ್ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಸಾವನ್ನಪ್ಪಿದ್ದು. ಸ್ಥಳಕ್ಕೆ ಎ.ಎಸ್ಪಿ ಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಬಸವನಹಳ್ಳಿ ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ. ಅನ್ವರ್ ಹತ್ಯೆಗೆ ನಿಖರವಾದ ಕಾರಣ ಮೇಲ್ನೋಟಕ್ಕೆ ಪೊಲೀಸರಿಗೆ ಸಿಕ್ಕಲ್ಲವಾದ್ರೂ, ಇದೊಂದು ರಾಜಕೀಯ ಕಾರಣವೋ ಅಥವಾ ವೈಯಕ್ತಿಕ ಕಾರಣದಿಂದ ಕೊಲೆ ನಡೆದಿದೆಯಾ ಎಂಬ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕವಾಗಿ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಹಿರಿದು ಪರಾರಿಯಾಗಿದ್ದಾರೆಂದು ತಿಳಿದುಬಂದಿದ್ದು, ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅಕ್ಕಪಕ್ಕದಲ್ಲಿರೋ ಸಿಸಿಟಿವಿ ಹಾಗೂ ಸ್ಥಳಿಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈಗಾಗಲೇ ಅನ್ವರ್ ಮೃತದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಸಂಬಂಧಿಕರು ಹಾಗೂ ಬಿಜೆಪಿ ಮುಖಂಡರು ಒತ್ತಾಯಿಸ್ತಿದ್ದಾರೆ. ಒಟ್ಟಾರೆ, ರಾಜಕೀಯ ಕಾರಣದಿಂದಲೋ ಅಥವಾ ವೈಯಕ್ತಿಕ ಕಾರಣದಿಂದಲೋ ಬಿಜೆಪಿಯ ಮುಖಂಡನೊಬ್ಬನ ಹತ್ಯೆಯಾಗಿದೆ. ಚಿಕ್ಕಮಗಳೂರು ಪೊಲೀಸರು ಶೀಘ್ರವಾಗಿ ಕೊಲೆಯ ಹಿಂದಿನ ಸತ್ಯವನ್ನು ತಿಳಿಸದೇ ಹೋದಲ್ಲಿ, ಈ ಪ್ರಕರಣ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗೋದ್ರಲ್ಲಿ ಎರಡು ಮಾತಿಲ್ಲ.