ಚಿಕ್ಕಮಗಳೂರು: ಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಸಿಕ್ಕಿ ಎಂಟು ವರ್ಷದ ಹೆಣ್ಣು ಚಿರತೆಯೊಂದು ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ನಾಗಬೋಗನ ಹಳ್ಳಿ ಬಳಿಯ ಬುಕ್ಕಾರಾಯನಕೆರೆಯಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ. ಉರುಳಿನಿಂದ ಬಿಡಿಸಿಕೊಳ್ಳಲು ಪ್ರಯತ್ನ ನಡೆಸಿರೋ ಚಿರತೆ ಒದ್ದಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಸ್ಥಳಕ್ಕೆ ಬುಕ್ಕಾಂಬುದಿ ಉಪವಲಯ ಅರಣ್ಯಾಧಿಕಾರಿ ಸಿದ್ದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಅರಣ್ಯಾಧಿಕಾರಿಗಳು ಉರುಳು ಹಾಕಿದವರ ಹುಡುಕಾಟಕ್ಕೆ ಮುಂದಾಗಿದ್ದಾರೆ.