ಚಿಕ್ಕಮಗಳೂರು -ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರು ನುಡಿದಂತೆ ನಡೆದ ಮಹಾನ್ ವ್ಯಕ್ತಿ, ಅವರ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಗೌರೀಗದ್ದೆ ದತ್ತಾಶ್ರಮದ ಶ್ರೀ ವಿನಯ್ ಗುರೂಜಿ ಹೇಳಿದರು.ನಗರದ ಎಂಇಎಸ್ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಪೂರ್ವಭಾವಿಯಾಗಿ “ಅಹಿಂಸಾ ಮಾರ್ಗ” ಸಂಸ್ಥೆಯಿಂದ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸುವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲ ಅವರೊಬ್ಬ ಸರಳ ಮತ್ತು ಸಜ್ಜನಿಕೆಯ ಆಧ್ಯಾತ್ಮ ಜೀವಿ, ಸಂತನಂತೆ ಬದುಕಿದ ಅವರು ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಎಂದರು.ತಮ್ಮ ಅಹಿಂಸೆಯ ಹೋರಾಟದಿಂದಾಗಿ ಮಹಾತ್ಮಾ ಗಾಂಧೀಜಿಯವರು ಪ್ರಪಂಚದಾದ್ಯಂತ ಅನೇಕ ಹೋರಾಟಗಳಿಗೆ ಸ್ಪೂರ್ತಿಯಾಗಿದ್ದಾರೆ, ರಾಷ್ಟ್ರಪಿತನ ಬದುಕು, ಅಹಿಂಸೆಯ ಮಾರ್ಗ ಮತ್ತು ಸಂದೇಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದ ಅವರು ಹಾಗಾದಾಗ ಮಾತ್ರ ಉತ್ತಮ ನಾಗರೀಕರಾಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಹಿಂಸಾ ಮಾರ್ಗ ಸಂಸ್ಥೆಯ ಸಂಚಾಲಕ ಬಿ.ಎಂ.ಸಂದೀಪ್ ರಾಷ್ಟ್ರಪಿತನ 150 ನೇ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳಲ್ಲಿ ಅವರ ಜೀವನ ಮತ್ತು ತತ್ವಾದರ್ಶಗಳ ಬಗ್ಗೆ ಚರ್ಚಾ ಸ್ಪರ್ಧೆ, ಭಾಷಣ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಛದ್ಮವೇಷ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಸಂಸ್ಥೆಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‍ಕುಮಾರ್ ಮಹಾತ್ಮಾ ಗಾಂಧೀಜಿಯವರ ಬದುಕು ಮತ್ತು ಅವರ ಅಹಿಂಸಾ ತತ್ವ ಇಂದಿನ ಯುವಪೀಳಿಗೆಗೆ ಆದರ್ಶವಾಗಬೇಕು ಎಂದು ಸಲಹೆ ಮಾಡಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.ಕಾಲೇಜಿನ ಆಡಳಿತಾಧಿಕಾರಿ ಎಸ್.ಶಾಂತಕುಮಾರಿ, ಪ್ರಾಚಾರ್ಯೆ ಎಂ.ಬಿ.ಜಯಶ್ರೀ, ಉಪನ್ಯಾಸಕ ಮಂಜುನಾಥ ಭಟ್, ಪ್ರೌಢಶಾಲೆಯ ಪ್ರಾಂಶುಪಾಲ ಲೋಕೇಶ್ ಉಪಸ್ಥಿತರಿದ್ದರು.ಉಪನ್ಯಾಸಕಿ ಹಸೀನಾ ಭಾನು ಕಾರ್ಯಕ್ರಮವನ್ನು ನಿರೂಪಿಸಿದರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ|| ವಿಷ್ಣುವರ್ಧನ್ ಸ್ವಾಗತಿಸಿದರು, ಶಾರದಾ ವಂದಿಸಿದರು.
Home ಸ್ಥಳಿಯ ಸುದ್ದಿ ಅಹಿಂಸೆಯ ಹೋರಾಟದಿಂದಾಗಿ ಮಹಾತ್ಮಾ ಗಾಂಧೀಜಿಯವರು ಪ್ರಪಂಚದಾದ್ಯಂತ ಅನೇಕ ಹೋರಾಟಗಳಿಗೆ ಸ್ಪೂರ್ತಿಯಾಗಿದ್ದಾರೆ,- ಶ್ರೀ ವಿನಯ್ ಗುರೂಜಿ…