ಚಿಕ್ಕಮಗಳೂರು ನಗರದ ಮಹಾತ್ಮಗಾಂಧಿ ಉದ್ಯಾನದಲ್ಲಿ ಗಾಂಧಿ ಜಯಂತಿ ಆಚರಣೆ

983

ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಸಭೆ ಹಾಗೂ ನೆಹರು ಯುವ ಕೇಂದ್ರ ವತಿಯಿಂದ ಇಂದು ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧೀಜಿ ಅವರ ೧೪೮ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ದಿವಂಗತ ಲಾಲ್‌ಬಹದ್ದೂರ್ ಶಾಸ್ತ್ರಿಯವರ ೧೧೧ ನೇ ಜನ್ಮದಿನಾಚರಣೆಯನ್ನು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆ ೯.೦೦ ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಜಿಲ್ಲಾಧಿಕಾರಿ ಜಿ. ಸತ್ಯವತಿ,  ನಗರಸಭಾ ಅಧ್ಯಕ್ಷ್ಷ ರವೀಂದ್ರನಾಥ ಪ್ರಭು, ಅಪರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಉಪ ವಿಭಾಗಾಧಿಕಾರಿ ಸಂಗಪ್ಪ, ಉಪಕಾರ್ಯದರ್ಶಿ ರಾಜ್‌ಗೋಪಾಲ್, ತಹಶೀಲ್ದಾರ್ ಶಿವಣ್ಣ ಮುಖಂಡರಾದ ಡಾ. ವಿಜಯಕುಮಾರ್, ಕೆ.ಟಿ. ರಾಧಾಕೃಷ್ಣ ಸೇರಿದಂತೆ ಅನೇಕ ಗಣ್ಯರು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಗಾಂಧಿಜೀ ಅವರಿಗೆ ಗೌರವ ನಮನ ಸಲ್ಲಿಸಿದರು. ನಂತರ ಟಿ.ಎಂ.ಎಸ್ ಶಾಲಾ ಮಕ್ಕಳಿಂದ ವೈಷ್ಣವಾ ಜನತೊ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವಧಳ ಕಾರ್ಯಕರ್ತೆಯರು ಸುಮಿರನ್ ಕರಲೊ ಮೇರಾ ಮನ್ ದೇಶಭಕ್ತಿಗೀತೆ ಹಾಗೂ ವಿಶ್ವವಿದ್ಯಾನಿಲಯ ಶಾಲಾ ಮಕ್ಕಳಿಂದ ರಘುಪತಿರಾಘವ ರಾಜಾರಾಂ ಭಜನೆ ನಡೆಸಿಕೊಟ್ಟರು.

ಶಶಿಕಾಂತ್ ಭಟ್ ಅವರಿಂದ ಭಗವದ್ಗೀತಾ ಹಾಗೂ ರಾಹಿಕ್ ಖಸ್ಮಿ ಅವರು ಖುರಾನ್ ಪಠಣ ಮಾಡಿದರೆ ಫಾದರ್ ಫ್ರಾನ್ಸಿಸ್ ಅವರು ಬೈಬಲ್ ಪ್ರವಚನ ಬೋದಿಸಿದರು. ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧೀಜಿ ಅವರ ಕುರಿತು ಹೊರತಂದಿರುವ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಪುಸ್ತಕವನ್ನು ಜಿಲ್ಲಾಧಿಕಾರಿಗಳು  ಹಾಗೂ ಗಣ್ಯರು ಬಿಡುಗಡೆ ಮಾಡಿದರು.

 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಶ್ವವಿದ್ಯಾಲಯ ವಿದ್ಯಾ ಸಂಸ್ಥೆ ಹಾಗೂ ಟಿ.ಎಂ.ಎಸ್ ಶಾಲೆ ವತಿಯಿಂದ ಆಯೋಜಿಸಿದ ಗಾಂಧೀಜಿಯವರ ವಿಚಾರಧಾರೆ ಕುರಿತ ಜಾಥಾ ಕಾರ್ಯಕ್ರಮಕ್ಕೆ  ಜಿಲ್ಲಾಧಿಕಾರಿ ಜಿ. ಸತ್ಯವತಿ ಚಾಲನೆ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್.ವೈ.ಕೆ.ಮಂಜುನಾಥ್ ನಿರೂಪಿಸಿದರು.

LEAVE A REPLY

Please enter your comment!
Please enter your name here