ಚಿಕ್ಕಮಗಳೂರು : ಮಾತೃ ಪೂರ್ಣ ಯೋಜನೆ ಅನುಷ್ಟಾನದಲ್ಲಿ ರಾಜ್ಯದಲ್ಲಿ ಜಿಲ್ಲೆ ೫ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಎಸ್.ಸಿ. ಎಸ್.ಪಿ ಮತ್ತು ಟಿ.ಎಸ್.ಪಿ. ಯೋಜನೆಯ ಅನುಷ್ಠಾನದ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾತೃ ಪೂರ್ಣ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ೫ನೇ ಸ್ಥಾನದಲ್ಲಿರುವುದು ಸಂತೋಷದ ವಿಷಯವೇ ಆದರೆ, ಪ್ರಥಮ ಸ್ಥಾನಕ್ಕೆ ಬರಲು ಅಧಿಕಾರಿಗಳು ಶ್ರಮ ವಹಿಸಬೇಕೆಂದು ಹೇಳಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ೬೫೭೦ ಗರ್ಭಿಣಿಯರು, ೬೩೬೨ ಬಾಣಂತಿಯರು ನೊಂದಾಯಿಸಿಕೊಂಡಿದ್ದು ಇವರಲ್ಲಿ ಗರ್ಭಿಣಿಯರು ೩೪೭೦, ಬಾಣಂತಿಯರು ೩೩೨೯ ಅಂಗನವಾಡಿ ಕೇಂದ್ರಗಳಿಗೆ ಹಾಜರಾಗಿ ಪೌಷ್ಟಿಕ ಆಹಾರ ಸೇವಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದ ಫಲಾನುಭವಿಗಳ ಜಮೀನುಗಳಲ್ಲಿ ಕೊರೆದಿರುವ ಕೊಳವೆ ಬಾವಿಗಳಿಗೆ ಹಾಗೂ ಕುಡಿಯುವ ನೀರಿಗೆ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂಗೆ ಅರ್ಜಿ ಸಲ್ಲಿಸಿದ ೭ದಿನಗಳೊಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ನಿಯಮವಿದೆ. ವಿದ್ಯುತ್ ಸಂಪರ್ಕಕ್ಕಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಗಿರಿಜನರು ಹೆಚ್ಚು ವಾಸಿಸುವ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಿಸುವ ಕುರಿತು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಭವನಗಳ ನಿರ್ಮಾಣಕ್ಕೆ ಎಲ್ಲೆಲ್ಲಿ ನಿವೇಶಗಳ ಲಭ್ಯತೆ ಇದೆ ಅಂತಹ ಕಡೆಗೆ ಪ್ರಥಮ ಆದ್ಯತೆ ನೀಡುವಂತೆ ಸೂಚಿಸಿದರು. ೧೨ ಸಮುದಾಯ ಭವನಗಳ ನಿರ್ಮಾಣ ಮಾಡಲು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ ಉಳಿದ ಕಡೆ ನಿವೇಶನ ಲಭ್ಯವಿರುವುದಿಲ್ಲ ನಿವೇಶನ ಗುರುತಿಸಿ ಸಮುದಾಯ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗಿರಿಜನ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ವಿವಿಧ ಇಲಾಖೆಗಳಲ್ಲಿ ಇನ್ನು ಫಲಾನುಭವಿಗಳ ಆಯ್ಕೆ ಕಾರ್ಯ ನಡೆದಿರುವುದಿಲ್ಲ ಸೆಪ್ಟೆಂಬರ್ ಮಾಹೆಯ ಅಂತ್ಯದ ವೇಳೆಗೆ ಶೇ.೯೦ರಷ್ಟು ಪ್ರಗತಿಯಾಗಬೇಕಾಗಿತ್ತು. ಕೆಲವು ಇಲಾಖೆಗಳಲ್ಲಿ ಫಲಾನುಭವಿಗಳ ಆಯ್ಕೆ ಆಯಾ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವುದರಿಂದ ಶಾಸಕರ ಗಮನಕ್ಕೆ ತಂದು ಅಕ್ಟೋಬರ್ ಮಾಹೆಯ ಅಂತ್ಯದೊಳಗೆ ಪ್ರಗತಿ ಸಾಧಿಸುವಂತೆ ತಿಳಿಸಿದ ಅವರು ಅಕ್ಟೋಬರ್ ಮಾಹೆಯೊಳಗೆ ಪ್ರಗತಿ ಆಗದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದ ಅವರು ೨೦೧೩ರ ಎಸ್.ಸಿ. ಎಸ್.ಪಿ ಮತ್ತು ಟಿ.ಎಸ್.ಪಿ. ಕಾಯ್ದೆ ಅನ್ವಯ ಗುರಿ ಸಾಧಿಸದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದರಲ್ಲದೆ ಕೆಳ ಹಂತದ ಅಧಿಕಾರಿಗಳ ನಿಕ್ಷ್ಯದಿಂದಾಗಿ ಕಾರ್ಯಕ್ರಮಗಳು ಕುಂಟಿತವಾಗುತ್ತವೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಜಿ.ಪಂ. ಕಾರ್ಯದರ್ಶಿ ರಾಜಗೋಪಾಲ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಮಂಜುನಾಥ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮುನಿಸ್ವಾಮಯ್ಯ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.