ಖಾಸಗಿ ಶಾಲೆಗಳು ಸುಲಿಗೆ ಮಾಡುತ್ತಾವೆ ಅನ್ನೋದಕ್ಕೆ ಮೂಡಿಗೆರೆ ಒಕ್ಕಲಿಗರ ಸಂಘದ ಶಾಲೆ ಜೀವಂತ ಸಾಕ್ಷಿ…

4468

ಮೂಡಿಗೆರೆ : ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ವಿದ್ಯಾಭ್ಯಾಸ ಸಿಗೋದಿಲ್ಲ ಎಂದು ಪೋಷಕರು ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಆದರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಒಕ್ಕಲಿಗರ ಸಂಘದ ಶಾಲೆ ಮಕ್ಕಳ ಭವಿಷ್ಯ ರೂಪಿಸೋದು ನಮ್ಮ ಗುರಿಯಲ್ಲ, ಶಿಕ್ಷಣದ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ಮಾಡೋದು ನಮ್ಮ ಉದ್ದೇಶ ಎಂಬಂತೆ ವರ್ತಿಸುತ್ತಿದೆ. ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ ಎಂದಿದ್ದಕ್ಕೆ ಪೋಷಕರ ಸಭೆಯಲ್ಲಿ ನಮ್ಮ ನಡೆಯನ್ನ ಪ್ರಶ್ನೆ ಮಾಡುವಂತಹಾ ಪೋಷಕರು, ಮಕ್ಕಳು ನಮಗೆ ಬೇಡ, ಟಿಸಿ ವಾಪಸ್ ಕೊಡ್ತೇವೆ ಬೇರೆ ಶಾಲೆ ನೋಡಿಕೊಳ್ಳಿ ಎಂದು ಹೇಳ್ತಾರೆ ಅಂದ್ರೆ ಇವರ ಶಾಲಾ ಮನೋಭಾವ ಏನೆಂಬುದನ್ನ ಬಿಡಿಸಿ ಹೇಳೋದು ಬೇಡ ಅನ್ಸತ್ತೆ.

ಹೌದು, ಒಕ್ಕಲಿಗರ ಸಂಘ ಎಜುಕೇಷನ್ ಟ್ರಸ್ಟ್ ವತಿಯಿಂದ, ನರ್ಸರಿಯಿಂದ ದ್ವಿತಿಯ ಪಿಯುಸಿವರೆಗೂ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರೋ ಮೂಡಿಗೆರೆಯ ಒಕ್ಕಲಿಗರ ಸಂಘದ ಶಾಲೆಯಲ್ಲಿ ಸಂಬಂಳ ನೀಡಬೇಕೆಂದು ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ಶಿಕ್ಷಕರಿಗೆ ನಿಮ್ಮ ಟೀಚಿಂಗ್ ಸರಿ ಇಲ್ಲ ಎಂದು ಬದಲು ಮಾಡ್ತಿದ್ದಾರೆ. ಪೋಷಕರ ಸಭೆಯಲ್ಲಿ ಪ್ರತಿ 2-3 ತಿಂಗಳಿಗೆ ಹೀಗೆ ಶಿಕ್ಷಕರನ್ನ ಬದಲು ಮಾಡಿದರೆ ಮಕ್ಕಳ ಭವಿಷ್ಯ ಏನಾಗಬೇಡ ಎಂದು ಫಾತಿಮ ಹಾಗೂ ಪ್ರತಿಮಾ ಎಂಬ ಪೋಷಕರು ಪ್ರಶ್ನೆ ಕೇಳಿದ್ದಕ್ಕೆ ಶಾಲೆಯ ಆಡಳಿತ ಮಂಡಳಿಯ ಸದಸ್ಯ ಹಾಗೂ ಮಾಜಿ ಸಚಿವ ಡಿ.ಎಂ.ಪುಟ್ಟೇಗೌಡ, ನೀವು ನಮಗೆ ಪ್ರಶ್ನೇ ಮಾಡುತ್ತೀರಾ. ನಿಮ್ಮಂತ ಪೋಷಕರು ಹಾಗೂ ಮಕ್ಕಳು ನಮಗೆ ಅಗತ್ಯವಿಲ್ಲ. ನಿಮ್ಮ ಮಗುವಿನ ಟಿಸಿ ವಾಪಸ್ ಕೊಡುತ್ತೇವೆ ಬೇರೆ ಶಾಲೆ ನೋಡಿಕೊಳ್ಳಿ ಎಂದು ಉದ್ಧಟತನದಿಂದ ಮಾತನಾಡಿದ್ದಾರೆ.

ಆದರೆ, ಈ ಶಾಲೆಯಿಂದ ಟಿಸಿ ಪಡೆದುಕೊಂಡು ಹೋದ ಮಕ್ಕಳಿಗೆ ಮೂಡಿಗೆರೆಯ ಬೇರೆ ಶಾಲೆಯಲ್ಲಿ ಅವಕಾಶ ಸಿಗ್ತಿಲ್ಲ. ಯಾಕೆಂದರೆ, ಕಳೆದ ವರ್ಷ ಫಸ್ಟ್ ಕ್ಲಾಸ್ ಬಂದಿರೋ ವಿದ್ಯಾರ್ಥಿ ಈ ವರ್ಷ ಜಸ್ಟ್ ಪಾಸ್ ಆಗಿ ಟಿಸಿ ತಂದ್ರೆ ಯಾರೂ ಸೀಟ್ ಕೊಡೋದಿಲ್ಲ. ಮಕ್ಕಳು ಯಾಕೆ ಹೀಗೆ ಫೇಲ್ ಆಗ್ತಿದ್ದಾರೆ, ರಿಸಲ್ಟ್ ಕಮ್ಮಿ ಬರುತ್ತಿದೆ ಎಂದು ಪೋಷಕರು ಚೆಕ್ ಮಾಡಿದರೆ ಫೇಲ್ ಆಗಿರೋದು ಶಾಲಾ ಆಡಳಿತ ಮಂಡಳಿ. ಸಂಬಂಳ ನೀಡಬೇಕಾಗುತ್ತೆಂದು 2-3 ತಿಂಗಳಿಗೆ ಶಿಕ್ಷಕರನ್ನ ಚೇಂಜ್ ಮಾಡಿದರೆ ರಿಸಲ್ಟ್ ಎಲ್ಲಿಂದ ಬರುತ್ತೆ. ಬಹುಶಃ ಈ ಶಾಲೆ ಆಡಳಿತ ಮಂಡಳಿಯವ್ರು ರಿಸಲ್ಟ್ ಅನ್ನೋದು ಮಾರ್ಕೇಟ್‍ನಲ್ಲಿ ಸಿಗುತ್ತೆ ಅಂತ ತಿಳಿದಿದ್ದಾರೋ ಏನೋ.

ಯಾವಾಗ, ಪ್ರತಿಮಾ ನಾಗರಾಜ್ ಹಾಗೂ ಫಾತಿಮಾಗೆ ಡಿ.ಎಂ.ಪುಟ್ಟೇಗೌಡ ಉಲ್ಟಾ-ಸೀದಾ ಮಾತನಾಡಿದರೋ ಆಗ ಉಳಿದ ಪೋಷಕರು ಆಡಳಿತ ಮಂಡಳಿಯವ್ರ ವಿರುದ್ಧ ತಿರುಗಿ ಬಿದ್ದರು. ಸ್ವಾಮಿಗಳೇ, ಕಾಫಿಗಿಡದಲ್ಲಿ ದುಡ್ಡು ಬಿಡೋದಿಲ್ಲ. ನಾವು ವರ್ಷಗಟ್ಟಲೇ ಹಗಲಿರುಳು ಕಷ್ಟಪಟ್ಟು ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಲೆಂದು ಇಲ್ಲಿ ಸೇರಿಸಿದ್ದೇವೆ, ನೀವು ಕೇಳಿದಾಗೆಲ್ಲಾ ಹಣ ನೀಡೋರು ನಾವು ನಮ್ಮ ಪ್ರಶ್ನೇಗೆ ಉತ್ತರ ನೀಡಿ ಎಂದಾಗ, ವೀರಾವೇಶದಿಂದ ಟಿಸಿ ಕೊಡ್ತೀವಿ ಅಂದ ಡಿ.ಎಂ.ಪುಟ್ಟೇಗೌಡ ಸಾಹೇಬ್ರು ಬಂದೇ ಅಂತ ಹೋದೋರು ಕಾರ್ ಹತ್ಕೊಂಡ್ ಹಂಗೇ ಮನೆಗೆ ಹೋದ್ರಂತೆ. ನಂತರ ಪೋಷಕರು ಆಕ್ರೋಶಭರಿತರಾದ ಕಾರಣ ಶಾಲೆಯ ವೆಂಕಟೇಶ್, ಪುಣ್ಯಮೂರ್ತಿ, ಹಾಗೂ ವಿಶ್ವನಾಥ್ ರೈ, ಗೌಡರಿಗೆ ವಯಸ್ಸಾಗಿದೆ ಕ್ಷಮಿಸಿ, ನಾಳೆ ಪ್ರೆಯರ್ ಹಾಲ್‍ನಲ್ಲಿ ನಿಮಗೆ ಕ್ಷಮೆ ಕೋರಿಸುತ್ತೇವೆಂದು ಎಲ್ಲರನ್ನೂ ಸಮಾಧಾನ ಮಾಡಿದ್ದಾರೆ. ಆದ್ರೆ, ಮಾಜಿ ಸಂಸದರ ವರ್ತನೆಗೆ ಪೋಷಕರು ಕಿಡಿಕಾರಿದ್ದಾರೆ.

ಇನ್ನು, ಸಿಬಿಎಸ್‍ಸಿ ಸ್ಕಿಂ ಅಳವಡಿಸಿಕೊಂಡಿರೋ ಈ ಶಾಲೆಯಲ್ಲಿ ಶಿಕ್ಷಕರಿಗೆ ಗ್ರ್ಯಾಚುಯಿಟಿ ಫಂಡ್ ಅಥವ ಪಿಎಫ್ ಯಾವುದು ಇಲ್ಲವಂತೆ. ನಮ್ಮ ಸ್ಕೀಂನಲ್ಲಿ ಅವೆಲ್ಲಾ ಇಲ್ಲ ಅಂತಾರಂತೆ. ಅಲ್ಲಿಗೆ ಉದಯವಾಯಿತು ನಮ್ಮ ಮಕ್ಕಳ ಭವಿಷ್ಯ ಅನ್ನೋದು ಪೋಷಕರು ಹಾಗೂ ಶಿಕ್ಷಕರಿಗೂ ಗೊತ್ತಾಗಿದೆ. ಇನ್ನೂ ಈ ಶಾಲೆಯಲ್ಲಿ ಮಕ್ಕಳಿಗೆ ಸಿಬ್ಬಂದಿಗಳು ಎಂತಹಾ ಶಿಕ್ಷೆ ನೀಡಿದರೂ ಪೋಷಕರು ಕೇಳಬಾರದು. ಕೆನ್ನೆ, ಬೆನ್ನಿನ ಮೇಲೆ ಬಾಸುಂಡೆ ಬಂದ್ರು ಕ್ವಷನ್ ಮಾಡುವಂತಿಲ್ಲ. ಕೇಳಿದಾಗೆಲ್ಲಾ ಹಣ ತಂದು ಕಟ್ಟಬೇಕು.

ಇನ್ನು ಈ ಶಾಲೆಯಲ್ಲಿ ಒಂದೇ ವರ್ಷಕ್ಕೆ 15ಕ್ಕೂ ಹೆಚ್ಚು ಶಿಕ್ಷಕರು ಕೆಲಸ ಬಿಟ್ಟಿದ್ದಾರೆ ಅಂದ್ರೆ ಆಡಳಿತ ಮಂಡಳಿಯ ಮೇಲೆಯೇ ಅನುಮಾನ ಮೂಡೋದು ಸರ್ವೇ ಸಾಮಾನ್ಯ. ಆದರೆ, ಬಿಟ್ಟಂತ ಶಿಕ್ಷಕರೆಲ್ಲಾ ಹೇಳೋದು ಒಂದೇ. ಸಂಬಳ ನೀಡೋದಿಲ್ಲ, ಕೇಳುದ್ರೆ ಟಾರ್ಗೆಟ್ ಮಾಡ್ತಾರೆ ಅನ್ನೋದು. ಇನ್ನು, ಈ ಶಾಲೆಯ ಹಾಸ್ಟೆಲ್‍ನಲ್ಲಿ ಕಳೆದ ವರ್ಷ ಆರೋಗ್ಯ ಸರಿ ಇಲ್ಲದ ಕಾರಣ ವಾರ್ಡನ್ 15 ದಿನ ರಜೆ ಹಾಕಿದ್ರು. ಅಂತಹ ಸಂದರ್ಭದಲ್ಲಿ ಮಕ್ಕಳು ಹಾಸ್ಟೆಲ್‍ನ ಸಿಸಿ ಟಿವಿಯನ್ನ ತಿರುಗಿಸಿ ಹೊರಗಿನಿಂದ ಕವರ್, ಪ್ಯಾಕೇಟ್‍ಗಳನ್ನ ಪಡೆದುಕೊಂಡಿದ್ರು. ಆದರೆ, ಆ ಜಾಗಕ್ಕೆ ಬೇರೆ ವಾರ್ಡನ್ ನೇಮಿಸದ ಆಡಳಿತ ಮಂಡಳಿ ಅವರಿಗೂ ಮಾನಸಿಕ ಕಿರುಕುಳ ನೀಡಿ ಅವರೇ ಕೆಲಸ ಬಿಡುವಂತೆ ಮಾಡಿದ್ದರು.

ಇದೀಗ, ಈ ಶಾಲೆಯಲ್ಲಿ ಮಕ್ಕಳ ಭವಿಷ್ಯಕ್ಕಿಂತ ಇವರಿಗೆ ದುಡ್ಡೇ ಮುಖ್ಯ ಎಂದು ಮನವರಿಕೆಯಾಗಿರೋ ಪೋಷಕರೇ ಶಾಲೆಯ ಆಡಳಿತ ಮಂಡಳಿ ವಿರುದ್ಧ ತಿರುಗಿ ಬೀಳೋಕೆ ಮುಂದಾಗಿದ್ದಾರೆ. ಶಾಲಾ ಆಡಳಿತ ಮಂಡಳಿಯವರ ಅಹಂಕಾರದ ನಡೆಗೆ ತಕ್ಕ ಪಾಠ ಕಲಿಸೋಕೆ ತೀರ್ಮಾನಿಸಿದ್ದಾರೆ. ಆದರೆ, ಖಾಸಗಿ ಶಾಲೆ ತೆರೆಯುತ್ತಿದ್ದೇವೆಂದಾಗಲೇ ಇದು ಬ್ಯುಸಿನೆಸ್ ಜೊತೆ ಮಕ್ಕಳ ಭವಿಷ್ಯ ರೂಪಿಸೋ ಜವಾಬ್ದಾರಿ ಅನ್ನೋದು ಅವರಿಗೆ ಅರ್ಥವಾಗಬೇಕು. ಅದು ಅರ್ಥವಾಗೋದಿಲ್ಲ ಅಂದ್ರೆ ಬಹುಶಃ ಅವರು ಮನುಷ್ಯರಲ್ಲ, ಧನ ಪಿಶಾಚಿಗಳು ಅಂತಿದ್ದಾರೆ ಮೂಡಿಗೆರೆ ಜನ.

 

LEAVE A REPLY

Please enter your comment!
Please enter your name here