ಹಾಸನ : ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ 55 ಹಾಸಿಗೆಗಳ ನವಜಾತ ಶಿಶುಗಳ ತೀವ್ರ ನಿಗಾಘಟಕವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಇಂದು ಉದ್ಘಾಟಿಸಿದರು. ಇದರಿಂದ ರಾಜ್ಯದಲ್ಲೆ ಅತಿ ಹೆಚ್ಚು ಹಾಸಿಗೆ ಉಳ್ಳ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಎಂಬ ಹೆಗ್ಗಳಿಕೆಗೆ ಹಾಸನ ಜಿಲ್ಲಾ ಆಸ್ಪತ್ರೆ ಪಾತ್ರವಾಗಿದೆ. ಮಕ್ಕಳ ದಿನಾಚರಣೆ ವಿಶೇಷ ಕೊಡುಗೆಯೆಂಬಂತೆ ಇಂದು ತೀವ್ರ ನಿಗಾ ಘಟಕವನ್ನು ಜಿಲ್ಲಾಧಿಕಾರಿ ಅವರು ಸೇವೆಗೆ ಸಮರ್ಪಿಸಿದರು.
ರೇಡಿಯೆಂಟ್ ವಾರ್ಮರ್, ನಿಯೋನಾಟಲ್ ವೆಂಟಿಲೇಟರ್, ಬಬ್ಬಲ್ ಸಿಪಿಎಪಿ, ಎಬಿಜಿ ಮೆಷಿನ್, ಸಿರಂಜ್ ಪಂಪ್ ಸೇರಿದಂತೆ ಇತರ ಸೌಲಭ್ಯಗಳನ್ನು ಈ ಕೇಂದ್ರ ಒಳಗೊಂಡಿದೆ. ಸಮಸ್ಯೆಯಿಂದ ಬಳಲುವ ಎಲ್ಲಾ ನವಜಾತ ಶಿಶುಗಳಿಗೆ ಇಲ್ಲಿ ಚಿಕಿತ್ಸಾ ಸೌಲಭ್ಯ ವಿಶೇಷ ಕಾಳಜಿ ದೊರೆಯಲಿದೆ ಹಾಗೂ ಮೊಲೆಹಾಲು ಕುಡಿಸುವ ವಿಧಾನಗಳ ಬಗ್ಗೆಯು ಮಾಹಿತಿ ನೀಡಲಾಗುತ್ತದೆ.
ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೂಢೀಕರಿಸಿ ಹಾಲಿ ಇದ್ದ 20 ಹಾಸಿಗೆಗಳ ನವಜಾತ ಶಿಶುಗಳ ತೀವ್ರ ನಿಗಾ ಘಟಕವನ್ನು 55 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿಶೇಷ ಕಾಳಜಿ ಹಾಗೂ ಹಾಸನ ವೈದ್ಯಕೀಯ ಕಾಲೇಜು ನಿರ್ದೇಶಕರಾದ ಡಾ. ಬಿ.ಸಿ.ರವಿಕುಮಾರ್, ಶಸ್ತ್ರ ಚಿಕಿತ್ಸಕರಾದ ಡಾ. ಶಂಕರ್, ನವಜಾತ ಶಿಶು ಚಿಕಿತ್ಸಾ ವೈದ್ಯಾಧಿಕಾರಿಗಳು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೆಂಕಟೇಶ್ ಅವರ ಪ್ರಯತ್ನದ ಫಲವಾಗಿ ಈ ತೀವ್ರ ನಿಗಾಘಟಕ ಸಿದ್ದಗೊಂಡಿದೆ.
ಹಿಮ್ಸ್ ನಿರ್ದೇಶಕ ಡಾ. ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್, ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಲತಾ, ಡಾ. ಕುಮಾರ್, ಡಾ. ಮನುಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.