ಮುಂಗಾರಿನ ಅಭಿಷೇಕದೊಂದಿಗೆ ಮುದಗೊಂಡ ಮಲೆನಾಡು ಹಸುರಿನ ಸೊಬಗನ್ನು ಮೈತುಂಬಿಕೊಂಡ ಮದುವಣಗಿತ್ತಿಯಂತೆ ಶೋಭಿಸುತ್ತಿರುವ ಈ ಸಮಯದಲ್ಲಿ ಕವಿವಾಣಿಯು ಮತ್ತಷ್ಟು ಅರ್ಥಪೂರ್ಣವಾಗಿ ತೋರುತ್ತಿದೆ.
ಹೌದು, ಆಷಾಢದ ದಿಡ್ಡಿ ಬಾಗಿಲನ್ನು ತೆರೆದು ಮುಂಗಾರು ಮತ್ತೆ ರೈತರ ಪಾಲಿನ ಭಾಗ್ಯನಿಧಿಯಾಗಿ ಆಗಮಿಸಿದೆ.ಇಂದು ಒದ್ದೆಯಾದ ಬಟ್ಟೆಯೊಂದಿಗೆ ಸಿಡಿಮಿಡಿಗೊಳ್ಳುತ್ತಾ ಮನೆಯೊಳಗೆ ಅಡಿ ಇಡುವ ನಾವು ಮಳೆಯೊಂದಿಗೆ ಬಾಲ್ಯದಲ್ಲಿ ಕಳೆದ ಅಭೂತಪೂರ್ವ ಕ್ಷಣಗಳನ್ನು ಮನಸ್ಸಿಗೆ ಮುದನೀಡುತ್ತಿದ್ದ ಗದ್ದೆ,ಕೆರೆ,ದಂಡೆಗಳ ಸಂಚಾರವನ್ನು ಸಂಗಾತಿಯ ನೆನಪಿಗೆ ಬೆಚ್ಚನೆಯ ಹೊದಿಕೆಯನ್ನು ಹೊದಿಸುತ್ತಿದ್ದ ಪುಳಕವನ್ನು ಅಕ್ಷರಶಃ ಮರೆತಿದ್ದೇವೆ.
ಪಶ್ಚಿಮ ಘಟ್ಟಗಳ ಮಗ್ಗುಲಲ್ಲಿ ಮೈಚಾಚಿಕೊಂಡಿರುವ ಮಲೆನಾಡಿನ ಪುಟ್ಟ ಊರು ಮೂಡಿಗೆರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಡಿಲ ಕೂಸು. ಇಲ್ಲಿ ಕವಿ ಮನಸಿನ ಕಲಾರಸಿಕರಿಗೆ ಎಣೆ ಇಲ್ಲದಷ್ಟು ಪ್ರಕೃತಿ ಸೌಂದರ್ಯದ ರಸದೌತಣಕ್ಕೇನೂ ಕೊರತೆಯಿಲ್ಲ. ಮುಂಗಾರಿನ ಸಿಂಚನದೊಂದಿಗೆ ಇಲ್ಲಿನ ದೇವರಮನೆ, ಶಿಶಿಲ, ಭೈರವೇಶ್ವರ ಬೆಟ್ಟಗಳು,ಹಸಿರು ಮೈಹೊದ್ದು ಪ್ರವಾಸಿಗರನ್ನೂ ಚಾರಣಿಗರನ್ನೂ ತನ್ನತ್ತ ಸೆಳೆಯುತ್ತಿವೆ.ನಡುವೆಯೇ ಧುಮ್ಮಿಕ್ಕುವ ನೂರಾರು ಜಲಧಾರೆಗಳು ಪ್ರಕೃತಿ ಮಾತೆಯ ಸಿಂಗಾರದೊಡವೆಯಂತೆ ಕಂಗೊಳಿಸುತ್ತಿವೆ. ಪದತಲದಲ್ಲಿ ಭೋರ್ಗರೆದು ಹರಿಯುವ ಹೇಮಾವತಿಯ ನಡಿಗೆ ರಮಣೀಯವಾಗಿದೆ.
ಮಳೆ ಶುರುವಾಯಿತೆಂದರೆ ಸಾಕು ಎಲ್ಲೋ ಅವಿತಿಟ್ಟ ಕೊಡೆಗಳು, ರೈನ್ಕೋಟ್ ಗಳು ಹೊರಬರುತ್ತವೆ. ಬೆಚ್ಚನೆಯ ಬಟ್ಟೆಗಳೊಂದಿಗೆ ಖಾರವಾದ ತಿನಿಸುಗಳಿಗೆ ನಾಲಿಗೆ ಹಪಹಪಿಸತೊಡಗುತ್ತದೆ. ಮಳೆಗಾಲಕ್ಕೆಂದೇ ಮಾಡಿಟ್ಟ ಹಲಸು, ಮರಗೆಣಸಿನ ಹಪ್ಪಳ , ಚಿಪ್ಸ್, ವಿವಿಧ ಬಗೆಯ ಸಂಡಿಗೆಗಳು ಸಂಜೆಯ ಹೊತ್ತಿಗೆ ಕಾಫಿಯ ಗಮ್ಮತ್ತನ್ನು ಇಮ್ಮಡಿಗೊಳಿಸುತ್ತವೆ. ಅದಕ್ಕೂ ಮಿಗಿಲಾಗಿ ವಿಶೇಷವಾಗಿ ಮಳೆಗಾಲದಲ್ಲಿ ತಯಾರಿಸುವ ಹಳ್ಳಿ ಸೊಗಡಿನ ಕಳಲೆ ಪಲ್ಯ, ಅಣಬೆ ಸಾರು, ಕೆಸುವಿನ ಗಂಟು ಜೊತೆಗೆ ನೀರಿನ ಹರಿವಿನೊಂದಿಗೆ ದೊರಕುವ ಹಳ್ಳದ ಮೀನು, ಮಳಲೆ ಮೀನಿನ ಸಾರಿನ ಘಮಕ್ಕೆ ಮನಸೋಲದಿರಲು ಆಗುವುದಿಲ್ಲ. ಸಾಧಾರಣ ಶೀತ ಜ್ವರಕ್ಕೆ ರಾಮಬಾಣದಂತೆ ಪರಿಣಮಿಸುವ ಗದ್ದೆಗಳಲ್ಲಿ ದೊರಕುವ ಹುಲ್ಲು ಏಡಿ ಸಾರಿನ ಸ್ವಾದ , ಬಿಸಿ ಅಕ್ಕಿ ರೊಟ್ಟಿ ಮತ್ತು ತುಪ್ಪದೊಂದಿಗೆ ಸವಿದವರು ಮಾತ್ರ ವರ್ಣಿಸಲು ಸಾಧ್ಯ.ಹಿಂದೆ ಮಳೆಗಾಲದಲ್ಲಿ ಸಂಗ್ರಹಿಸುತ್ತಿದ್ದ ಹಲಸಿನಗಾಳವನ್ನು ಒಲೆಯ ನಿಗಿಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದಾಗ ಸಿಗುತ್ತಿದ್ದ ಮಜ ಖಂಡಿತ ಇಂದಿನ ಯಾವ ಕುರುಕಲಿಗೂ ಸಮವಲ್ಲ.ಜೊತೆಯಲ್ಲೆ ತಯಾರಾಗುತ್ತಿದ್ದ ಹಲಸಿನ ಹಣ್ಣಿನ ಕಡುಬು, ದೋಸೆ,ಮುಳುಕ, ಎಲ್ಲವು ಆಧುನಿಕತೆಯೊಂದಿಗೆ ತಮ್ಮ ಘಮವನ್ನು ಕಳೆದುಕೊಂಡವೇನೋ ಎಂದು ಭಾಸವಾಗುತ್ತಿದೆ. ಅದೃಷ್ಟವಶಾತ್ ಹೆಚ್ಚಿನ ಮಲೆನಾಡಿಗರು ಮಳೆಗಾಲದಲ್ಲಿ ಈ ಎಲ್ಲಾ ಖಾದ್ಯಗಳ ಸವಿಯನ್ನು ಇಂದಿಗೂ ಸವಿಯುತ್ತಾ ಮಲೆನಾಡಿನ ಆಹಾರ ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ.
ಪರಿಸರ ಪ್ರಿಯರು,ಪ್ರವಾಸಿಗರು ಮರೆಯದೇ ಭೇಟಿಕೊಡಬೇಕಾದ ತಮ್ಮ ಪ್ರಯಾಣವನ್ನು ಚಿಕ್ಕಮಗಳೂರಿನ ಸಮೀಪದ ಬಾಬಾ ಬುಡನ್ ಗಿರಿ,ಕಲ್ಲತ್ತಗಿರಿ,ಕೆಮ್ಮಣ್ಣುಗುಂಡಿ,ಯೊಂದಿಗೆ ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿಯ ರುದ್ರರಮಣೀಯ ಸೊಬಗನ್ನು ಆಸ್ಪಾದಿಸುವುದರೊಂದಿಗೆ ಆರಂಭಿಸಬಹುದು.ಸ್ಫಟಿಕದ ಮಣಿಯಂತೆ ಧಮ್ಮಿಕ್ಕುವ ಮಾಣಿಕ್ಯಧಾರಾ ಜಲಪಾತವೂ ಈ ಭೇಟಿಯ ಭಾಗವಾಗುತ್ತದೆ. ನಂತರ ಹೇಮವತಿಯ ಉಗಮಸ್ಥಾನ ಜಾವಳಿ, ಕಳಸದ ಕಳಸೇಶ್ವರ,ಹೊರನಾಡಿನ ಅನ್ನಪೂರ್ಣೆಶ್ವರಿಯ ದರ್ಶನದೊಂದಿಗೆ, ಶೃಂಗೇರಿಯತ್ತ ಪ್ರಯಾಣ ಬೆಳೆಸಿ ತಾಯಿ ಶಾರದೆಯ ದರ್ಶನದೊಂದಿಗೆ ಋಷ್ಯಶೃಂಗ ದೇವಸ್ಥಾನ ಹಾಗೂ ಸಿರಿಮನೆ ಜಲಪಾತದ ಸೊಬಗನ್ನು ಆಸ್ವಾದಿಸಬಹುದು.
ಅಯ್ಯೋ! ಮಳೆ ಸುರಿಯುತ್ತಾ ಇದೆ ಎಂದು ಗೊಣಗಿಕೊಳ್ಳತ್ತಾ ಮನೆಯೊಳಗೆ ಕೂರುವ ಬದಲು ಮಳೆಗಾಲದಲ್ಲಿ ಅನಾವರಣಗೊಳ್ಳುವ ಪ್ರಕೃತಿ ಸೌಂದರ್ಯ, ಜೀವ ವೈವಿಧ್ಯದ ಸೊಬಗು ಆರೋಗ್ಯದಾಯಕ ಆಹಾರ ಪರಿಚಯ ಎಲ್ಲವನ್ನು ನಮ್ಮ ಮಕ್ಕಳಿಗೆ ಮಾಡಿಸೋಣ. ಕಣ್ಣು ಮುಚ್ಚಿ ಕೂರದೇ ಮಲೆನಾಡಿನ ಸೊಬಗಿನ ಪರಂಪರೆಯನ್ನು ಮುಂದಿನ ಪೀಳಿಗೆ ಕಾಪಿಟ್ಟುಕೊಳ್ಳುವಂತೆ ಮಾಡೋಣ. ಪೂರ್ವಜನ್ಮದ ಸುಕೃತದ ಫಲ ನಾವು ಇಂದು ಮಲೆನಾಡಿಗರು ಈ ಭೂ ಸ್ವರ್ಗವನ್ನು ಪರಿಸರ ಕಾಳಜಿಯೊಂದಿಗೆ ಮತ್ತಷ್ಟು ಸುಂದರವನ್ನಾಗಿಸೋಣ.