ಬೆಂಗಳೂರು: ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೇರವೇರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದು, ಕೃತಜ್ಞತೆ ಸಲ್ಲಿಸಿದ್ದು, ಅಖಂಡ ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸಮಸ್ತ ಕನ್ನಡ ನಾಡನ್ನು ಅಭಿವೃದ್ಧಿ ಪಡಿಸುವುದು ಸಮ್ಮಿಶ್ರ ಸರ್ಕಾರದ ಉದ್ದೇಶ. ಸರ್ವರಿಗೂ ಶಿಕ್ಷಣ, ಸಾಮಾಜಿಕ ನ್ಯಾಯ ಒದಗಿಸುವುದು. ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಮೊದಲ ಆದ್ಯತೆಯಾಗಿದೆ. ಇದಕ್ಕೆ ಸರಕಾರ ಸದಾ ಬದ್ಧವಾಗಿರಲಿದೆ ಹಾಗೂ ರೈತರನ್ನು ಚಿಂತೆಯಿಂದ ಮುಕ್ತಗೊಳಿಸಬೇಕೆಂದು ಶತಪ್ರಯತ್ನ ಮಾಡುತ್ತಿದ್ದೇನೆ. ನಿಮ್ಮೊಂದಿಗೆ ನಾನಿದ್ದೇನೆ, ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಆತ್ಮಹತ್ಯೆ ಸುದ್ದಿ ಕೇಳಿದಾಗ ನನ್ನ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತೆ ದುಃಖವಾಗುತ್ತೆ. ದಯಮಾಡಿ ಯಾವ ರೈತರೂ ಆತ್ಮಹತ್ಯೆಗೆ ಶರಣಾಗಬೇಡಿ. ಆತ್ಮಹತ್ಯೆಯ ಕರಾಳ ಹಾದಿ ಇಲ್ಲಿಗೇ ಮುಕ್ತಾಯಗೊಳ್ಳಲಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕನ್ನಡದ ಆದಿ ಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪು ಅವರನ್ನು ನೆನೆದ ಮುಖ್ಯಮಂತ್ರಿ ಎಲ್ಲಾ ಕವಿಗಳೂ, ಮಹನೀಯರೂ ನಾಡಿಗೆ ಕೊಡುಗೆ ನೀಡಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಒಲಿದಿವೆ. ಈ ಮೂಲಕ ಕನ್ನಡದ ಹಿರಿಮೆ ರಾಷ್ಟ್ರವ್ಯಾಪಿ ತಲುಪಿದೆ. ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕನ್ನಡಕ್ಕೆ ಕನ್ನಡವೇ ಸರಿಸಾಟಿ ಎನ್ನುತ್ತಾ ಕನ್ನಡದ ಮಹತ್ವವನ್ನು ಕುಮಾರಸ್ವಾಮಿ ಸಾರಿದರು.