ಪ್ರಾಣಾಯಾಮ ಮತ್ತು ಯೋಗಕ್ಕೆ ಮನಸ್ಸನ್ನು ನಿಯಂತ್ರಿಸುವ, ಶಕ್ತಿಯಿದೆ…

428
firstsuddi

ಚಿಕ್ಕಮಗಳೂರು -ಮಕ್ಕಳು ಎಳೆಯ ವಯಸ್ಸಿನಿಂದಲೇ ಪ್ರಾಣಾಯಾಮ ಮತ್ತು ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಾಲ್ಲೂಕು ಕ್ರೀಡಾಧಿಕಾರಿಸಲಹೆ ಮಾಡಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ಆಯೋಜಿಸಿರುವ ಯೋಗಸಪ್ತಾಹಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಾಣಾಯಾಮ ಮತ್ತು ಯೋಗಕ್ಕೆ ಮನಸ್ಸನ್ನು ನಿಯಂತ್ರಿಸುವ, ಸಧೃಡ ಆರೋಗ್ಯವನ್ನು ನೀಡುವ ಶಕ್ತಿಯಿದೆ, ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ನಿರೋಗಿಯಾಗಿ ಬದುಕಲು ಸಾಧ್ಯವಾಗುತ್ತದೆ, ಯೋಗದಿಂದ ಮಾನಸಿಕ, ದೈಹಿಕ ಆರೋಗ್ಯ ಲಭಿಸುತ್ತದೆ ಎಂದು ಕಿವಿಮಾತು ಹೇಳಿದರು.ವೈದ್ಯರುಗಳು ಸಹ ಇಂದು ಯೋಗದತ್ತ ವಾಲುತ್ತಿದ್ದಾರೆ ತಮ್ಮಿಂದ ಗುಣಪಡಿಸಲಾಗದ ರೋಗಿಗಳಿಗೆ ಯೋಗ ಕಲಿಯಲು ಸಲಹೆ ಮಾಡುತ್ತಿದ್ದಾರೆ ಎಂದ ಅವರು ಯೋಗಾಭ್ಯಾಸದಿಂದ ಸಮಚಿತ್ತವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಜೂ.21 ರಂದು ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲೂ ವಿಶ್ವಯೋಗ ದಿನವನ್ನು ಆಚರಿಸುವಂತೆ ಇಲಾಖೆಯಿಂದ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗಧೀಶಾಚಾರ್ ಮಾತನಾಡಿ ನಮ್ಮ ಹಿರಿಯರು ಯೋಗ ಮತ್ತು ಪ್ರಾಣಾಯಾಮ ಮಾಡುತ್ತಿದ್ದರು, ಅದರಿಂದಾಗಿ ಅವರು ಆರೋಗ್ಯವಂತರಾಗಿದ್ದರು ನಾವು ಇಂದು ಅದನ್ನು ಬಿಟ್ಟಿರುವ ಪರಿಣಾಮ ರೋಗಗಳಿಂದ ಬಳಲುತ್ತಿದ್ದೇವೆ ಎಂದು ವಿಷಾದಿಸಿದರು.
ಇಂದಿನ ಪೀಳಿಗೆ ಈಗಲಾದರೂ ಎಚ್ಚೆತ್ತು ಯೋಗಾಭ್ಯಾಸಕ್ಕೆ ಮುಂದಾಗುವ ಮೂಲಕ ಆರೋಗ್ಯವಂತರಾಗಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಯೋಗಸಪ್ತಾಹದ ಅಂಗವಾಗಿ ಇಂದಿನಿಂದ ಜೂ.21ರವರೆಗೆ ಶಾಲೆಯಲ್ಲಿ ಪ್ರತಿದಿನ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಸೂರ್ಯನಮಸ್ಕಾರ, ಪ್ರಾಣಾಯಾಮ ಮತ್ತು ಯೋಗವನ್ನು ಕಲಿಸಲಾಗುವುದು ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಗೀತಾ ಅಧ್ಯಕ್ಷತೆ ವಹಿಸಿದ್ದರು, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್ ಉಪಸ್ಥಿತರಿದ್ದರು.ಶಿಕ್ಷಕರಾದ ನಾಗವೇಣಿ ಕಾರ್ಯಕ್ರಮವನ್ನು ನಿರೂಪಿಸಿದರು, ಜಯಂತಿ ಸ್ವಾಗತಿಸಿದರು, ಸಾವಿತ್ರಿ ವಂದಿಸಿದರು.