ಚುನಾವಣಾ ಪೂರ್ವ ಸಮೀಕ್ಷೆ ರಾಜ್ಯದಲ್ಲಿ ಅತಂತ್ರ ವಿಧಾನ ಸಭೆ ಸೃಷ್ಟಿ : ಟುಡೇಸ್ ಚಾಣಕ್ಯ ಸ್ಪಷ್ಟನೆ

713

ಬೆಂಗಳೂರು: ಟುಡೇಸ್ ಚಾಣಕ್ಯ ಹೆಸರಿನಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ಎಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂಬುದಾಗಿ ತಿಳಿದುಬಂದಿದೆ. ಈ ಕುರಿತು ಟುಡೇಸ್ ಚಾಣಕ್ಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅಕೌಂಟ್ ನಲ್ಲಿ ಸ್ಪಷ್ಟನೆ ನೀಡಿದೆ. ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಇದೊಂದು ಸುಳ್ಳು ಸುದ್ದಿಯಾಗಿದೆ. ದಯವಿಟ್ಟು ಈ ಟ್ವೀಟ್ ಗೆ ಪ್ರತಿಕ್ರಿಯಿಸಿ.. ಧನ್ಯವಾದಗಳು ಅಂತ ತಿಳಿಸಿದೆ.

ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದ್ದು, ಮೂರು ಪ್ರಮುಖ ಪಕ್ಷಗಳು 70+ ಸ್ಥಾನಗಳನ್ನು ಪಡೆಯಲಿವೆ. ಆಡಳಿತಾರೂಢ ಕಾಂಗ್ರೆಸ್ ಸಾಕಷ್ಟು ಸಂಖ್ಯೆಯಲ್ಲಿ ಸ್ಥಾನ ಕಳೆದುಕೊಳ್ಳಲಿದ್ದು, 224 ಕ್ಷೇತ್ರಗಳ ಪೈಕಿ 76 ಸ್ಥಾನ ಗಳಿಸಿದೆ. ಬಿಜೆಪಿ 75 ಮತ್ತು ಜೆಡಿಎಸ್-ಬಿಎಸ್‍ಪಿ ಮೈತ್ರಿಕೂಟ 70 ಸ್ಥಾನಗಳಿಸಿದ್ದು, ಮೂರು ಸ್ಥಾನಗಳು ಪಕ್ಷೇತರರಿಗೆ ಸಿಗಲಿದೆ. ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಶೇ. 35 ಬಿಜೆಪಿಗೆ ಶೇ.34 ಮತ್ತು ಜೆಡಿಎಸ್ ಶೇ.27ರಷ್ಟು ಮತಗಳು ಹಂಚಿಕೆಯಾಗಲಿದ್ದು, ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ.

ಒಟ್ಟಿನಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ. ಮಾ. 10ರಿಂದ 21ರವರೆಗೆ ರಾಜ್ಯದ 283 ವಿಧಾನಸಭಾ ಕ್ಷೇತ್ರಗಳ 14 ಸಾವಿರ ಮತದಾರರನ್ನು ಸಂಪರ್ಕಿಸಿ ಟುಡೇಸ್ ಚಾಣಕ್ಯ ಈ ವರದಿ ಸಿದ್ಧಪಡಿಸಿದೆ ಎಂಬುದಾಗಿ ಹರದಾಡುತ್ತಿದೆ. 2014ರ ಲೋಕಸಭಾ ಚುನಾವಣೆ ವೇಳೆ ಎಲ್ಲ ಸಮೀಕ್ಷೆಗಳಿಗಿಂತ ಟುಡೇಸ್ ಚಾಣಕ್ಯ ಸಮೀಕ್ಷೆ ಹೆಚ್ಚು ನಿಖರವಾಗಿತ್ತು. ಬಿಜೆಪಿ 291 ಸ್ಥಾನಗಳಿಸಲಿದ್ದು ಇದರಲ್ಲಿ 14 ಸ್ಥಾನ ಜಾಸ್ತಿ ಅಥವಾ ಕಡಿಮೆ ಪಡೆಯಬಹುದು ಎಂದು ತಿಳಿಸಿತ್ತು.