ಚಿಕ್ಕಮಗಳೂರು : ಕಡೂರು ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ನಿಲುಗಡೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‍ಶೆಟ್ಟಿ ಬಣದ ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಒತ್ತಾಯಿಸಿದ್ದಾರೆ. ವೇದಿಕೆಯ ಜಿಲ್ಲಾಧ್ಯಕ್ಷ ವಿಶ್ವನಾಥ್ ಕಾಶಿ ಮತ್ತು ಜಿಲ್ಲಾ ಸಂಚಾಲಕ ದಿನೇಶ್ ಶಿವಪುರ ಅವರ ನೇತೃತ್ವದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಾಯಕ ಸಂಚಾರ ಅಧೀಕ್ಷಕ ರವಿಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿದ ಕಾರ್ಯಕರ್ತರು ಈ ಸಂಬಂಧ ಮನವಿ ಸಲ್ಲಿಸಿದರು.
ಲಕ್ಷ್ಮೀಪುರ ಮತ್ತು ಸುತ್ತಮುತ್ತಲ ಬಡ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಸಖರಾಯಪಟ್ಟಣ ಹಾಗೂ ಕಡೂರಿನ ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ತೆರಳುತ್ತಾರೆ, ಅದಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹಣ ತೆತ್ತು ಬಸ್ ಪಾಸ್‍ಗಳನ್ನು ಮಾಡಿಸಿಕೊಂಡಿದ್ದಾರೆ, ಆದರೆ ಆ ಮಾರ್ಗದಲ್ಲಿ ಸಂಚರಿಸುವ ಬಸ್‍ಗಳು ಆ ಗ್ರಾಮದಲ್ಲಿ ನಿಲುಗಡೆ ಮಾಡಬೇಕೆಂಬ ಆದೇಶವಿದ್ದರೂ ನಿಲುಗಡೆ ಮಾಡದೆ ತೆರಳುತ್ತಿವೆ ಎಂದು ಆರೋಪಿಸಿದರು.
ಗ್ರಾಮದ ವಿದ್ಯಾರ್ಥಿಗಳು ಬಸ್ ಪಾಸ್ ಹೊಂದಿರುವುದರಿಂದ ಸಂಸ್ಥೆಗೆ ಆದಾಯವಾಗುವುದಿಲ್ಲ ಎಂದು ಚಾಲಕರು ಮತ್ತು ನಿರ್ವಾಹಕರು ಬಸ್ ನಿಲುಗಡೆ ಮಾಡದೇ ತೆರಳುತ್ತಿದ್ದಾರೆ ಎಂದು ದೂರಿದ ಕಾರ್ಯಕರ್ತರು ಇದರಿಂದಾಗಿ ಬಸ್ ಪಾಸ್ ಹೊರತುಪಡಿಸಿ ಬೇರೆ ಹಣವಿಲ್ಲದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ ಎಂದು ತಿಳಿಸಿದರು.
ಇದರಿಂದಾಗಿ ಗ್ರಾಮದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ ಎಂದ ಕಾರ್ಯಕರ್ತರು ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಿಂದ ಕಡೂರಿಗೆ ಮತ್ತು ಕಡೂರಿನಿಂದ ಚಿಕ್ಕಮಗಳೂರಿಗೆ ಸಂಚರಿಸುವ ಬಸ್‍ಗಳನ್ನು ಗ್ರಾಮದಲ್ಲಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು, ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅನ್ವರ್, ವಿದ್ಯಾರ್ಥಿಗಳಾದ ಹೆಚ್.ಎಸ್.ಹರ್ಷ, ಎನ್.ಉಮೇಶ್, ಬಿ.ಕೆ.ಅರುಣ್ ಕುಮಾರ್, ಎ.ತಮ್ಮಯ್ಯ, ಕನ್ನಡ ರಾಜು, ಸಂತೋಷ್ ಹಾಜರಿದ್ದರು.