ಚಿಕ್ಕಮಗಳೂರು -ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಷ್ಟ್ರೀಯ ಬಸವದಳಗಳ ಒಕ್ಕೂಟದ ಕಾರ್ಯಕರ್ತರು ನಗರದ ಲೋಕಸಭಾ ಸದಸ್ಯರ ಕಛೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಸಂಸದರ ಕಛೇರಿ ಎದುರು ವಚನಗಳನ್ನು ಸಾಮೂಹಿಕವಾಗಿ ಹಾಡುತ್ತಾ ಧರಣಿ ನಡೆಸಿದ ಪ್ರತಿಭಟನಾಕಾರರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ ಧೋರಣೆ ತಾಳಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿರಕ್ತ ಮಠ ಬಸವ ಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ ಸಮಾಜದ ಎಲ್ಲಾ ವರ್ಗಗಳ ಜನರನ್ನೂ ಹೊಂದಿರುವ ಲಿಂಗಾಯತ ಧರ್ಮ ವಿಶ್ವಧರ್ಮವಾಗುವ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದು, ಅದಕ್ಕಿಂತ ಮುಂಚೆ ನಮ್ಮ ಸಂವಿಧಾನದ ಮಾನ್ಯತೆ ಹೊಂದಬೇಕಾಗಿದೆ ಎಂದರು.
ಜೈನ, ಸಿಖ್ ಸೇರಿದಂತೆ ಉಳಿದ ಎಲ್ಲಾ ಧರ್ಮಗಳಂತೆ ಲಿಂಗಾಯತ ಧರ್ಮಕ್ಕೂ ಸ್ವತಂತ್ರ ಧರ್ಮದ ಮಾನ್ಯತೆಯನ್ನು ನೀಡಬೇಕು ಎಂದ ಅವರು ಇಂಗ್ಲೆಂಡ್ ಮತ್ತು ಅಮೇರಿಕಾದ ಸಂಸತ್ ಭವನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಪ್ರತಿಮೆಯನ್ನು ಅನಾವರಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅದೇ ಬಸವಣ್ಣನವರು ಸ್ಥಾಪಿಸಿರುವ ಲಿಂಗಾಯತ ಧರ್ಮಕ್ಕೂ ಸಂವಿಧಾನದ ಮಾನ್ಯತೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ದೆಹಲಿ ಚಲೋ ಮತ್ತು ಪಾರ್ಲಿಮೆಂಟಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಾಗತಿಕ ಲಿಂಗಾಯಿತ ಮಹಾಸಭಾದ ನಿರ್ದೇಶಕ ಆರ್.ಆರ್.ಮಹೇಶ್ ಮಾತನಾಡಿ ಕೇಂದ್ರ ಸರ್ಕಾರ ಮಾನ್ಯತೆ ನೀಡದಿದ್ದಲ್ಲಿ ನ್ಯಾಯಾಲದ ಮೆಟ್ಟಿಲೇರಿ ನ್ಯಾಯ ಪಡೆಯುವ ಶಕ್ತಿ ಲಿಂಗಾಯತ ಸಮುದಾಯಕ್ಕಿದೆ ಎಂದರು.
ರಾಷ್ಟ್ರೀಯ ಬಸವದಳದ ನಗರಾಧ್ಯಕ್ಷ ಬಾಣೂರು ಚನ್ನಪ್ಪ ಮಾತನಾಡಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿ ನಾಲ್ಕೈದು ತಿಂಗಳಾಗಿದ್ದರೂ ಕೇಂದ್ರ ಸರ್ಕಾರ ಮಾನ್ಯತೆ ನೀಡದೆ ನಿರ್ಲಕ್ಷ ಧೋರಣೆ ತಾಳಿದೆ ಎಂದು ಆರೋಪಿಸಿದರು.
ಲೋಕಸಭಾ ಸದಸ್ಯರ ಆಪ್ತ ಕಾರ್ಯದರ್ಶಿ ಕಿರಣ್ ಅವರಿಗೆ ಮನವಿ ಸಲ್ಲಿಸಲಾಯಿತು, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಎ.ಸಿ.ಲೋಕೇಶಪ್ಪ, ಕಾರ್ಯದರ್ಶಿ ಉಮೇಶ್, ರಘು, ನಗರ ಉಪಾಧ್ಯಕ್ಷ ಎಂ.ಸಿ.ಚನ್ನೇಗೌಡ, ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಓಂಕಾರಪ್ಪ, ಮಲ್ಲಪ್ಪ, ಜಿಲ್ಲಾ ಪಂಚಾಯಿತಿ ನಿವೃತ್ತ ಯೋಜನಾಧಿಕಾರಿ ಎಂ.ಪಿ.ಶಂಕರಪ್ಪ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಪಿ.ರಾಜರತ್ನಂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Home ನಮ್ಮ ಮಲ್ನಾಡ್ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ…