ಹವಾಮಾನ ವೈಪರೀತ್ಯದಿಂದ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ : ಅಣ್ಣಾಮಲೈ

606

ಚಿಕ್ಕಮಗಳೂರು : ಸಾರ್ವಜನಿಕರು ಕುಡಿಯುವ ನೀರನ್ನು ಮಿತಬಳಕೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಲು ಮುಂದಾಗಬೇಕು ಎಂದು ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಸಲಹೆ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ನಗರಸಭೆ, ಪೋಲಿಸ್ ಇಲಾಖೆ, ಮತ್ತು ಶಾಸಕರ ಅನುದಾನದಿಂದ ನಗರದ ರಾಮನಹಳ್ಳಿಯ ಪೋಲಿಸ್ ವಸತಿ ಸಮುಚ್ಚಯದಲ್ಲಿ ಸ್ಥಾಪಿಸಿರುವ ಶುದ್ದಗಂಗಾ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹವಾಮಾನ ವೈಪರೀತ್ಯದಿಂದಾಗಿ ಕಳೆದ ಕೆಲವು ವರ್ಷಗಳಿಂದ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ, ಮಲೆನಾಡಿನಲ್ಲೂ ಇದೇ ಪರಿಸ್ಥಿತಿ ಇರುವುದು ಆತಂಕಕ್ಕೆ ಕಾರಣವಾಗಿದೆ ಎಂದ ಅವರು ಸಾರ್ವಜನಿಕರು ಈಗಲಾದರೂ ಎಚ್ಚೆತ್ತು ನೀರನ್ನು ಪೋಲು ಮಾಡದೇ, ಮಿತಬಳಕೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ಕನಿಷ್ಠ ಕುಡಿಯುವ ನೀರು ದೊರೆಯುತ್ತದೆ ಎಂದರು. ಶುದ್ದಗಂಗಾ ಕುಡಿಯುವ ನೀರಿನ ಘಟಕ ಕೇವಲ ಪೋಲಿಸ್ ವಸತಿ ಸಮುಚ್ಚಯಕ್ಕೆ ಮಾತ್ರ ಸೀಮಿತವಲ್ಲ ಅದನ್ನು ಸುತ್ತಮುತ್ತಲ ನಾಗರೀಕರೂ ಬಳಸಬಹುದು ಎಂದು ಕರೆ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ನಗರದಲ್ಲಿ ಶುದ್ದ ಗಂಗಾ ಘಟಕವನ್ನು ಸ್ಥಾಪಿಸುವ ಯೋಜನೆ ಇರಲಿಲ್ಲ, ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಅಣ್ಣಾಮಲೈ ಅವರ ಆಶಯ ಮತ್ತು ಸಂಪೂರ್ಣ ಸಹಕಾರದಿಂದಾಗಿ ಘಟಕ ಸ್ಥಾಪಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶುದ್ದ ಗಂಗಾ ವಿಭಾಗದ ಯೋಜನಾಧಿಕಾರಿ ಅಭಯ ರಾಜ್ ಜನತೆಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಣಾಭಿವೃದ್ದಿ ಯೋಜನೆಯಿಂದ ರಾಜ್ಯದಲ್ಲಿ 283 ಹಾಗೂ ಜಿಲ್ಲೆಯಲ್ಲಿ 39 ಶುದ್ದ ಗಂಗಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ನೂತನ ಘಟಕದಲ್ಲಿ ಪ್ರತಿ ಕುಟುಂಬಕ್ಕೆ  ಎರಡು ರೂಗೆ 20ಲೀ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು, ಶಾಸಕ ಸಿ.ಟಿ.ರವಿ, ಹೆಚ್ಚುವರಿ ಪೋಲಿಸ್ ಮುಖ್ಯಾಧಿಕಾರಿ ಜಗದೀಶ್, ಗ್ರಾಮೀಣಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಬೇಬಿ, ಮೇಲ್ವಿಚಾರಕ ನಾಗಭೂಷಣ್ ಪೈ ಉಪಸ್ಥಿತರಿದ್ದರು.