ಚೆನ್ನೈ : ಚೆನ್ನೈಯಲ್ಲಿ ಶಶಿಕಲಾ ಅವರಿಗೆ ಸೇರಿದ ಸ್ಥಳಗಳ ಮೇಲೆ ನ.9 ರಂದು ನಡೆದ ಆದಾಯ ತೆರಿಗೆ ದಾಳಿ ಇಂದೂ ಮುಂದುವರಿದಿದೆ. 1200 ಕೋಟಿ ಮೌಲ್ಯದ ಆಸ್ತಿ ದಾಖಲೆಗಳು, 2.5 ಕೋಟಿ ರೂ. ಮೌಲ್ಯದ 8.5 ಕೆ.ಜಿ ಚಿನ್ನ 6 ಕೋಟಿ ರೂ. ಮೌಲ್ಯದ ನಗದು ಹಣ ಜೊತೆಗೆ ಬೆಲೆಬಾಳುವ ವಜ್ರಾಭರಣಗಳು ಐಟಿ ದಾಳಿಯ ಸಮಯದಲ್ಲಿ ಪತ್ತೆಯಾಗಿವೆ ಎಂದು ಕೆಲವು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.
ಆದಾಯ ಮೀರಿ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಅವರಿಗೆ ಮೂರು ದಿನದಿಂದ ನಿದ್ದೆಯೂ ಇಲ್ಲ, ಊಟವೂ ಸೇರುತ್ತಿಲ್ಲ! ಏಕೆಂದರೆ ಈ ದಾಳಿ ನಡೆದಿದ್ದೇ ಶಶಿಕಲಾ ನಟರಾಜನ್ ಅವರನ್ನು ಗುರಿಯಾಗಿಸಿ! ಶಶಿಕಲಾ ಅವರಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನೂ, ಅಕ್ರಮ ಹಣವನ್ನೂ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂಬುದು ತಿಳಿದುಬಂದಿದೆ. ಆದರೆ ಐಟಿ ಅಧಿಕಾರಿಗಳಿಗೆ ಇದುವರೆಗೂ ಸಿಕ್ಕ ಹಣದ ಮೊತ್ತವೆಷ್ಟು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಯಾವ್ಯಾವುದೋ ಸ್ಥಳಗಳಲ್ಲಿ ಅಡಗಿಸಿಟ್ಟಿದ್ದ ಚಿನ್ನ ಮತ್ತಿತರ ಬೆಲೆಬಾಳುವ ವಸ್ತುಗಳು ಐಟಿ ಅಧಿಕಾರಿಗಳಿಗೆ ಸಿಕ್ಕಿವೆ.
ಇಂದೂ ಸಹ ಹಲವೆಡೆಗಳಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ‘ತೆರಿಗೆ ವಂಚಿಸಿದ ಅನುಮಾನದ ಮೇಲಷ್ಟೇ ನಾವು ದಾಳಿ ನಡೆಸಿದ್ದೇವೆ. ಅವರ ಬಳಿ ಇರುವ ಒಟ್ಟು ಹಣಗಳ ಲೆಕ್ಕವನ್ನು ಬಹಿರಂಗ ಪಡಿಸುವುದಕ್ಕೆ ಸಾಧ್ಯವಿಲ್ಲ’ ಎಂದು ಐಟಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಶಶಿಕಲಾ ನಟರಾಜನ್ ಮತ್ತವರ ಸಂಬಂಧಿ ಟಿಟಿವಿ ದಿನಕರನ್ ಅವರ ವಾಣಿಜ್ಯ ವ್ಯವಹಾರ ಸಂಸ್ಥೆಗಳು, ಅವರ ಸಂಬಂಧಿಕರ ಮನೆ, ಕಚೇರಿ, ಜಯಾ ಟಿವಿ ಕಚೇರಿ ಸೇರಿದಂತೆ 187 ಕಡೆಗಳಲ್ಲಿ ನ.9 ರಂದು ದಾಳಿ ನಡೆದಿತ್ತು. 2000 ಕ್ಕೂ ಅಧಿಕ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರು. ‘ಆಪರೇಶನ್ ಕ್ಲೀನ್ ಮನಿ’ ಎಂಬ ಯೋಜನೆಯ ಅಡಿಯಲ್ಲಿ ಐಟಿ ಇಲಾಖೆ ಈ ದಾಳಿ ನಡೆಸಿತ್ತು.