ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆ ಇಂದು ಕೂಡ ಮುಂದುವರೆದಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಶೃಂಗೇರಿ, ಕಳಸ, ಬಾಳೆಹೊನ್ನೂರಿನಲ್ಲಿ ಧಾರಾಕಾರ ಮಳೆಯಾಗಿದ್ದು ಮಳೆಗೆ ಓರ್ವ ಯುವಕ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ.ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ ಬಸ್ತಿ ಹಳ್ಳದ ಬಳಿ ಘಟನೆ ನಡೆದಿದೆ. ಬೈಕ್ ನಲ್ಲಿ ಕೊಗ್ರೆ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಆಶೋಕ್ (24) ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ಶಂಕಿಸಲಾಗುತ್ತಿದೆ, ಆತನ ಹುಡುಕಾಟದಲ್ಲಿ ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳು ನಿರತರಾಗಿದ್ದು, ಅಶೋಕ್ ನ ಬೈಕ್ ಪತ್ತೆಯಾಗಿದೆ. ಬಸ್ತಿ ಹಳ್ಳ ತುಂಬಿ ಹರಿಯುತ್ತಿದ್ದು ಅಶೋಕ್ ನ ಪತ್ತೆ ಇನ್ನು ಆಗಿಲ್ಲ. ಶೃಂಗೇರಿ ತಾಲೂಕಿನ ಮೇಗೂರು ಗ್ರಾಮದವನು ಎಂದು ಗುರುತಿಸಲಾಗಿದ್ದು ಅಶೋಕ್ ಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದ್ದು ಕಾರ್ಯಾಚರಣೆಗೆ ಜೆಸಿಬಿ ಕೂಡ ಬಳಕೆ ಮಾಡಿಕೊಳ್ಳಲಾಗಿದೆ.