ಚಿಕ್ಕಮಗಳೂರು : ಟಗರು ಚಿತ್ರದ ಪ್ರಮೋಷನ್‍ಗಾಗಿ ನಟ ಶಿವಣ್ಣ ಹಾಗೂ ಚಿತ್ರದ ಮತ್ತೊಬ್ಬ ಲೀಡ್ ರೋಲ್ ನಟ ಡಾಲಿ ಧನಂಜಯ್ ಇಂದು ಚಿಕ್ಕಮಗಳೂರಿಗೆ ಆಗಮಿಸಿದ್ರು. ಸಂಜೆ 4 ಗಂಟೆಗೆ ಬಂದ ಶಿವಣ್ಣ ಹಾಗೂ ಧನಂಜಯ್ ಆಜಾದ್ ಪಾರ್ಕ್ ವೃತ್ತದಿಂದ ರೋಡ್ ಶೋ ಮೂಲಕ ಮಿಲನ ಚಿತ್ರಮಂದಿರಕ್ಕೆ ಆಗಮಿಸಿದರು. ಶಿವಣ್ಣ ಬರುತ್ತಾರೆಂದು ಸುದ್ದಿ ತಿಳಿದ ಶಿವಣ್ಣ ಅಭಿಮಾನಿ ಯುವಕರು ಮಧ್ಯಾಹ್ನ ಮೂರು ಗಂಟೆಯಿಂದಲೇ ಆಜಾದ್ ಪಾರ್ಕ್ ವೃತ್ತದಲ್ಲಿ ಡ್ರಮ್ ಸೆಟ್ ಭಾರಿಸಿಕೊಂಡು ಕುಣಿದು ಕುಪ್ಪಳಿಸಿದ್ರು. ಆಟೋದಲ್ಲಿ ಟಗರು ಶಿವಣ್ಣ ಚಿಕ್ಕಮಗಳೂರು ಬರುತ್ತಾರೆಂದು ಅನೌನ್ಸ್ ಮಾಡಿದರು. ಶಿವಣ್ಣ ಬರುತ್ತಿದ್ದಂತೆ ಟಗರು ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನ ರಂಜಿಸಿದರು. ಯುವಕರು ತಮ್ಮ ಮೊಬೈಲ್ ಹಿಡಿದು ಸೆಲ್ಫಿಗಾಗಿ ಶಿವಣ್ಣನ ಮೇಲೆ ಮುಗಿಬಿದ್ದರು. ತೆರೆದ ವಾಹನದ ಮೇಲೆಯೇ ಹತ್ತಿ ಸೆಲ್ಫಿ ತೆಗೆದುಕೊಂಡು ಖುಷಿಪಟ್ರು. ಶಿವಣ್ಣ ಥಿಯೇಟರ್ ಬಳಿ ಆಗಮಿಸುತ್ತಿದ್ದಂತೆ ನೂರಾರು ಯುವಕರು ಕುಣಿದು ಕುಪ್ಪಳಿಸಿದ್ರು. ಶಿವಣ್ಣ ಜೊತೆಯೇ ಟಾಕೀಸ್ ಪ್ರವೇಶಿಸಲು ಯತ್ನಿಸಿದ ಅಭಿಮಾನಿಗಳನ್ನ ನಿಯಂತ್ರಿಸೋದಕ್ಕೆ ಪೊಲೀಸರು ಹರಸಾಹಸಪಟ್ರು. ನೆರೆದಿದ್ದ ಸಾವಿರಕ್ಕೂ ಅಧಿಕ ಯುವಕರನ್ನುದ್ದೇಶಿಸಿ ಮಾತನಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿ, ಆನಂದ್ ಚಿತ್ರದ ನಂತರ ಇದೇ ಮೊದಲು ಇಲ್ಲಿಗೆ ಬಂದಿದ್ದು ಎಂದು ಹಳೇ ನೆನಪುಗಳನ್ನ ಮೆಲುಕು ಹಾಕಿದ್ರು. ಅಭಿಮಾನಿಗಳ ಮನವಿ ಮೇರೆಗೆ ಜನುಮದ ಜೋಡಿ ಚಿತ್ರದ ಎರಡು ಹಾಡುಗಳನ್ನ ಹಾಡಿ ನೆರೆದಿದ್ದವರನ್ನ ರಂಜಿಸಿದರು.