ಚಿಕ್ಕಮಗಳೂರು- ಶಿಕ್ಷಕರು ನಿವೃತ್ತಿ ನಂತರ ವಿಶ್ರಮಿಸಬಾರದು, ಬಡ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ತಮ್ಮ ವೃತ್ತಿಯನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ವಿರಕ್ತಮಠ ಬಸವಮಂದಿರದ ಕಿವಿಮಾತು ಹೇಳಿದರು.
ನಗರದ ವಿರಕ್ತಮಠ ಬಸವಮಂದಿರದಲ್ಲಿ ಶಿಕ್ಷಕರಿಗಾಗಿ ಶನಿವಾರ ಏರ್ಪಡಿಸಿದ್ದ ಅನುಬಂಧ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕಲಿತ ವಿದ್ಯೆ ಸಾರ್ಥಕವಾಗುವುದು ಅದನ್ನು ಇನ್ನೊಬ್ಬರಿಗೆ ಕಲಿಸಿದಾಗ ಮಾತ್ರ ಎಂದ ಅವರು ಶಿಕ್ಷಕರು ಇದನ್ನು ಅರಿತು ನಿವೃತ್ತಿ ನಂತರ ಕನಿಷ್ಠ ತಮ್ಮ ಸುತ್ತಮುತ್ತಲ ಬಡವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡಬೇಕು ಎಂದು ಸಲಹೆ ಮಾಡಿದರು.ಶಿಕ್ಷಕ ವೃತ್ತಿ ಬಹಳ ಪವಿತ್ರ ಮತ್ತು ಅತ್ಯಂತ ಗೌರವಯುತವಾದ ವೃತ್ತಿ, ಅದನ್ನು ಶಿಕ್ಷಕರು ಸೇವೆಯೆಂದು ಪರಿಗಣಿಸಬೇಕು, ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಮತ್ತು ದೇಶದ ಭವಿಷ್ಯವನ್ನು ರೂಪಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ, ಶಿಕ್ಷಕರು ತರಗತಿಯಲ್ಲಿ ಪಾಠದ ಮೂಲಕ ಮಕ್ಕಳನ್ನು ಸಚ್ಚಾರಿತ್ರ್ಯವಂತರು ಮತ್ತು ವಿದ್ಯಾವಂತರನ್ನಾಗಿ ಮಾಡಿದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯ ಮಾತನಾಡಿ ಮಕ್ಕಳ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು, ಮಕ್ಕಳನ್ನು ತಿದ್ದಿ ತೀಡಿ ಅವರನ್ನು ವಿಕಾಸಗೊಳಿಸುವ ಶಕ್ತಿ ಶಿಕ್ಷಕರಲ್ಲಿ ಮಾತ್ರ ಇದೆ ಎಂದು ತಿಳಿಸಿದರು.